ಅಂದು ಗೌರಿ ಪೋಷಕರಿಗಾಗಿ ಹೆಸರು ಬದಲಾಯಿಸಿಕೊಂಡಿದ್ದರಂತೆ ಶಾರುಖ್ ಖಾನ್!...ಬಾಲಿವುಡ್ ಬಾದ್ ಶಾನ ಪ್ರೇಮಕಥೆಯ ರೋಚಕ ಪುಟಗಳು ಇಲ್ಲಿವೆ.. Shah Rukh Khan

Shah Rukh Khan ಸಾಂದರ್ಭಿಕ ಚಿತ್ರ
Shah Rukh Khan ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಮಾದರಿ ದಂಪತಿಗಳಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೋಡಿ ಮುಂಚೂಣಿಯಲ್ಲಿ ನಿಲ್ಲುತ್ತದೆ
  • ಇಡೀ ದೇಶವೇ ಸಂಭ್ರಮಿಸುವ ಈ ಇಬ್ಬರ ದಾಂಪತ್ಯ ಜೀವನದ ಆರಂಭದ ದಿನಗಳು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ
  • ಈ ಜೋಡಿಯ ಅಂತರಧರ್ಮೀಯ ಪ್ರೇಮ ಸಂಬಂಧಕ್ಕೆ ಗೌರಿ ಖಾನ್ ಅವರ ಕುಟುಂಬದವರಿಂದ ಆರಂಭದಲ್ಲಿ ತೀವ್ರ ವಿರೋಧ
Shah Rukh Khan: ಬಾಲಿವುಡ್‌ನ ಮಾದರಿ ದಂಪತಿಗಳಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೋಡಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಆದರೆ, ಇಂದು ಇಡೀ ದೇಶವೇ ಸಂಭ್ರಮಿಸುವ ಈ ಇಬ್ಬರ ದಾಂಪತ್ಯ ಜೀವನದ ಆರಂಭದ ದಿನಗಳು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ವಿಭಿನ್ನ ಧರ್ಮ ಹಾಗೂ ಹಿನ್ನೆಲೆಯಿಂದ ಬಂದಿದ್ದ ಈ ಜೋಡಿಯ ಅಂತರಧರ್ಮೀಯ ಪ್ರೇಮ ಸಂಬಂಧಕ್ಕೆ ಗೌರಿ ಖಾನ್ ಅವರ ಕುಟುಂಬದವರಿಂದ ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರೇಯಸಿಯ ಮನೆಯವರ ಮನ ಗೆಲ್ಲಲು ಮತ್ತು ಅವರ ಒಪ್ಪಿಗೆಯನ್ನು ಪಡೆದುಕೊಳ್ಳಲು ನಟ ಶಾರುಖ್ ಖಾನ್ ಅವರು ಅಂದು ತಮ್ಮ ಹೆಸರನ್ನೇ ಬದಲಿಸಿಕೊಂಡು ವಿಭಿನ್ನ ಹೆಸರುಗಳನ್ನು ಬಳಸುತ್ತಿದ್ದರು ಎಂಬ ರೋಚಕ ವಿಷಯ ಬೆಳಕಿಗೆ ಬಂದಿದೆ.

ಪ್ರೀತಿಗಾಗಿ ಬದಲಾದ ಹೆಸರುಗಳು!

ಮುಷ್ತಾಕ್ ಶೇಖ್ ಅವರು ಬರೆದಿರುವ ‘ಶಾರುಖ್ ಕ್ಯಾನ್’ (Shah Rukh Can) ಎಂಬ ಪುಸ್ತಕದಲ್ಲಿ ಈ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಡಲಾಗಿದ್ದು, ಗೌರಿ ಕುಟುಂಬದವರನ್ನು ಒಪ್ಪಿಸುವ ಸಲುವಾಗಿ ಶಾರುಖ್ ಹಿರಿಯ ನಟರಾದ ಜಿತೇಂದ್ರ ಮತ್ತು ರಾಜೇಂದ್ರ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ತಮ್ಮ ಹೆಸರನ್ನು ಜಿತೇಂದ್ರ ಕುಮಾರ್ ತುಲ್ಲಿ ಎಂದು ಬದಲಾಯಿಸಿಕೊಂಡಿದ್ದರು.
ಅಷ್ಟೇ ಅಲ್ಲದೇ, ಗೌರಿ ತಂದೆ-ತಾಯಿಗೆ ಶಾರುಖ್ ಇಸ್ಲಾಂ ಧರ್ಮಕ್ಕೆ ಸೇರಿದವರು ಎಂಬ ಆತಂಕವಿತ್ತು. ಜೊತೆಗೆ ಅವರು ಸಿನಿಮಾ ರಂಗಕ್ಕೆ ಸೇರಬಯಸಿದ್ದರಿಂದ ಪೋಷಕರ ಚಿಂತೆ ಇನ್ನಷ್ಟು ಹೆಚ್ಚಾಗಿತ್ತು. ಈ ಆತಂಕವನ್ನು ದೂರ ಮಾಡಲು ತಾನೊಬ್ಬ ಹಿಂದೂ ಹುಡುಗ ಎಂದು ನಂಬಿಸಲು ಶಾರುಖ್ ತಮ್ಮ ಹೆಸರನ್ನು ಅಭಿನವ್ ಎಂದೂ ಬದಲಾಯಿಸಿಕೊಂಡಿದ್ದರು.
ವರ್ಷಗಳ ನಂತರ ಟಿವಿ ಶೋ ಒಂದರಲ್ಲಿ ಮಾತನಾಡಿದ್ದ ಗೌರಿ ಖಾನ್, ನಾವಾಗ ತೀರಾ ಚಿಕ್ಕವರಾಗಿದ್ದರಿಂದ ಸಿನಿಮಾ ರಂಗಕ್ಕೆ ಹೋಗಲಿದ್ದ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ಕೈಗೊಂಡಿದ್ದೆವು. ಧರ್ಮದ ಕಾರಣಕ್ಕೆ ಪೋಷಕರು ಒಪ್ಪಲಿ ಎಂದು ಶಾರುಖ್ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದೆವು. ಆದರೆ ಇಂದು ಯೋಚಿಸಿದರೆ ಆ ನಿರ್ಧಾರ ತೀರಾ ತಮಾಷೆಯಾಗಿ ಕಾಣಿಸುತ್ತದೆ ಎಂದು ನೆನಪಿಸಿಕೊಂಡಿದ್ದಾರೆ.

ಎರಡೂ ಸಂಪ್ರದಾಯದಂತೆ ನಡೆದ ಮದುವೆ

1991ರ ಅಕ್ಟೋಬರ್ 25 ರಂದು ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಯಿತು. ಮದುವೆಯ ಸಮಯದಲ್ಲಿ ಗೌರಿಗೆ 21 ವರ್ಷ ಹಾಗೂ ಶಾರುಖ್ ಖಾನ್‌ಗೆ 26 ವರ್ಷ ವಯಸ್ಸಾಗಿತ್ತು. ಇಬ್ಬರೂ ಪರಸ್ಪರರ ಧರ್ಮ ಹಾಗೂ ಸಂಪ್ರದಾಯಕ್ಕೆ ಗೌರವ ನೀಡಿ ಹಿಂದೂ ಮತ್ತು ಮುಸ್ಲಿಂ ಎರಡೂ ಪದ್ಧತಿಗಳ ಪ್ರಕಾರ ಮದುವೆಯಾದರು.
ಮುಸ್ಲಿಂ ಸಂಪ್ರದಾಯದ ನಿಕಾಹ್ ವಿವಾಹಕ್ಕಾಗಿ ಗೌರಿ ಖಾನ್ ಅವರು ತಮ್ಮ ಹೆಸರನ್ನು ಆಯಿಷಾ ಎಂದು ಬದಲಿಸಿಕೊಂಡಿದ್ದರೆ, ಹಿಂದೂ ಪದ್ಧತಿಯ ಮದುವೆಗಾಗಿ ಶಾರುಖ್ ಹಿಂದೂ ಹೆಸರನ್ನು ಇಟ್ಟುಕೊಂಡಿದ್ದರು. ಈ ರಹಸ್ಯವನ್ನು ದಂಪತಿ ದೀರ್ಘಕಾಲದವರೆಗೆ ಸಾರ್ವಜನಿಕವಾಗಿ ಹಂಚಿಕೊಂಡಿರಲಿಲ್ಲ.

ಮನೆಯಲ್ಲಿ ದೀಪಾವಳಿ-ಈದ್ ಎರಡೂ ಸಂಭ್ರಮ

ಈ ದಂಪತಿಗೆ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಎಂಬ ಮೂವರು ಮಕ್ಕಳಿದ್ದಾರೆ. ತಂದೆ-ತಾಯಿ ಇಬ್ಬರ ಧರ್ಮಗಳನ್ನೂ ಮಕ್ಕಳು ಸಮಾನವಾಗಿ ಗೌರವಿಸುತ್ತಾರೆ. ಮನೆಯಲ್ಲಿ ಹಬ್ಬಗಳನ್ನು ಆಚರಿಸುವ ಬಗ್ಗೆ ಮಾತನಾಡಿರುವ ಗೌರಿ, ನಮ್ಮ ಮನೆಯಲ್ಲಿ ದೀಪಾವಳಿ ಬಂದರೆ ನಾನು ಪೂಜೆಯ ನೇತೃತ್ವ ವಹಿಸುತ್ತೇನೆ, ಉಳಿದವರು ನನ್ನನ್ನು ಹಿಂಬಾಲಿಸುತ್ತಾರೆ. ಅದೇ ರೀತಿ ಈದ್ ಹಬ್ಬ ಬಂದರೆ ಶಾರುಖ್ ಮುಂದೆ ನಿಲ್ಲುತ್ತಾರೆ, ನಾವೆಲ್ಲರೂ ಜೊತೆಯಾಗುತ್ತೇವೆ. ಮಕ್ಕಳು ಎರಡೂ ಹಬ್ಬಗಳನ್ನು ಅಷ್ಟೇ ಸಡಗರದಿಂದ ಆಚರಿಸುತ್ತಾರೆ," ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net