'ಟೈಗರ್​ ವರ್ಸಸ್​ ಪಠಾಣ್​'ನಲ್ಲಿ ಮತ್ತೆ ಜತೆಯಾಗಲಿದ್ದಾರೆ ಸಲ್ಮಾನ್​ ಮತ್ತು ಶಾರುಖ್​

Pathaan vs Tiger
Published on

ಮುಂಬೈ: 'ಪಠಾಣ್​' ಚಿತ್ರ ಅಷ್ಟೊಂದು ದೊಡ್ಡ ಮಟ್ಟಕ್ಕೆ ಹಿಟ್​ ಆಗುವುದರಲ್ಲಿ ಶಾರುಖ್​ ಖಾನ್​ ಜತೆಗೆ ಸಲ್ಮಾನ್​ ಖಾನ್ ಅವರ ಪಾತ್ರವೂ ದೊಡ್ಡದಿದೆ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಸಲ್ಮಾನ್​, ಚಿತ್ರದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ದುಷ್ಟರ ವಿರುದ್ಧ ಶಾರುಖ್ ಮತ್ತು ಸಲ್ಮಾನ್​ ತೊಡೆ ತಟ್ಟಿ ನಿಲ್ಲುವುದನ್ನು ನೋಡಿ ಫುಲ್​ ಖುಷಿಯಾಗಿದ್ದ ಅಭಿಮಾನಿಗಳು, ಅವರಿಬ್ಬರೂ ಒಂದು ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ನಟಿಸಿದರೆ ಎಷ್ಟು ಚೆನ್ನ ಎಂದು ಆಸೆಪಟ್ಟಿದ್ದರು.

ಆ ಆಸೆ ಇದೀಗ ಕೈಗೂಡುವ ಸಾಧ್ಯತೆ ಇದೆ. 'ಪಠಾಣ್​' ಚಿತ್ರವನ್ನು ನಿರ್ಮಿಸಿದ್ದ ಆದಿತ್ಯ ಚೋಪ್ರಾ, ಇದೀಗ ಶಾರುಖ್​ ಮತ್ತು ಸಲ್ಮಾನ್​ ಅಭಿನಯದಲ್ಲಿ ಚಿತ್ರವೊಂದನ್ನು ಘೋಷಿಸಿದ್ದಾರೆ. ಹೆಸರು 'ಟೈಗರ್​ ವರ್ಸಸ್​ ಪಠಾಣ್​'. ಈ ಚಿತ್ರದಲ್ಲಿ ಸಲ್ಮಾನ್​ ಮತ್ತು ಶಾರುಖ್​ ಇಬ್ಬರೂ ಏಜೆಂಟ್ ಟೈಗರ್​ ಮತ್ತು ಪಠಾಣ್​ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೋ ಗೊತ್ತಿಲ್ಲ. ಆದರೆ, ಇದು ಬಾಲಿವುಡ್​ನ ಅತ್ಯಂತ ದೊಡ್ಡ ಬಜೆಟ್​ನ ಚಿತ್ರವಾಗಲಿದೆ ಎಂಬ ಮಾತು ಈಗಲೇ ಕೇಳಿಬರುತ್ತಿದೆ. ಅದಕ್ಕೆ ಕಾರಣವೂ ಇದೆ, ಸಲ್ಮಾನ್​ ಮತ್ತು ಶಾರುಖ್​ ಅವರ ಸಂಭಾವನೆಯನ್ನು ಹೊರತುಪಡಿಸಿ, ಈ ಚಿತ್ರಕ್ಕೆ 300 ಕೋಟಿ ರೂ.ಗಳ ಬಜೆಟ್​ ಮೀಸಲಿಡಲಾಗಿದೆಯಂತೆ. ಇನ್ನು, ಇಬ್ಬರು ಸ್ಟಾರ್​ ನಟರ ಸಂಭಾವನೆಯೂ ಸೇರಿದರೆ, ಚಿತ್ರದ ಬಜೆಟ್​ 500-600 ಕೋಟಿ ರೂ. ದಾಟಲಿದೆ.

ಆದಿತ್ಯ ಚೋಪ್ರಾ ಈ ಚಿತ್ರದ ಮೇಲೆ ಅಷ್ಟೊಂದು ಹಣ ಸುರಿಯುತ್ತಿರುವುದಕ್ಕೂ ಕಾರಣವಿದೆ. 'ಪಠಾಣ್​' ಚಿತ್ರವು ಬಾಕ್ಸ್​-ಆಫೀಸ್​ನಲ್ಲಿ 1000 ಕೋಟಿ ರೂ. ಗಳಿಕೆ ಮಾಡಿತ್ತು. ಇನ್ನು, ಸ್ಯಾಟಿಲೈಟ್​ ಮತ್ತು ಡಿಜಿಟಲ್​ ಹಕ್ಕುಗಳಿಂದಲೂ ದೊಡ್ಡ ಮೊತ್ತವೇ ಸಿಕ್ಕಿತು. ಹೀಗಿರುವಾಗ ಇಬ್ಬರು ಸ್ಟಾರ್​ ನಟರು ಒಂದೇ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡರೆ, ಆಗ ಚಿತ್ರದ ಬಿಜಿನೆಸ್​ ಸಹ ದೊಡ್ಡ ಮಟ್ಟದಲ್ಲಿ ಆಗುವುದರಿಂದ, 'ಟೈಗರ್​ ವರ್ಸಸ್​ ಪಠಾಣ್​' ಚಿತ್ರಕ್ಕೆ 500 ಕೋಟಿ ರೂ.ವರೆಗೂ ಎತ್ತಿಡುವುದಕ್ಕೆ ಆದಿತ್ಯ ಚೋಪ್ರಾ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net