More

    ರಾಜಕೀಯದಲ್ಲಿ ಸಿನಿ ಗುಂಗು: ಪಕ್ಷದ ವರ್ಚಸ್ಸು ವೃದ್ಧಿ ಆಗಲಿಲ್ಲ, ವೈಯಕ್ತಿಕ ಛಾಪೂ ಮೂಡಿಸದ ತಾರೆಯರು

    | ವಿಲಾಸ ಮೇಲಗಿರಿ ಬೆಂಗಳೂರು

    ರಾಜಕೀಯಕ್ಕೂ ಸಿನಿಮಾ ರಂಗಕ್ಕೂ ಅವಿನಾಭಾವ ಸಂಬಂಧ. ಎರಡೂ ಕೂಡ ಸಾರ್ವಜನಿಕ ಜೀವನದ ಪ್ರಮುಖ ಭಾಗಗಳು. ಸಿನಿಮಾ ನಟರು ಸ್ಟಾರ್​ಗಳಾಗಿ ಜನರ ನಡುವೆ ಇದ್ದರೆ, ರಾಜಕೀಯ ನಾಯಕರು ಜನರ ಒಡನಾಡಿಗಳೇ ಆಗಿರುತ್ತಾರೆ. ರಾಷ್ಟ್ರ ರಾಜಕಾರಣದಂತೆಯೇ ಕರ್ನಾಟಕದ ರಾಜಕೀಯದಲ್ಲಿ ಕೂಡ ಸಿನಿಮಾ ತಾರೆಯರು ಅದೃಷ್ಟ ಪರೀಕ್ಷೆಗಿಳಿಯುವುದು ಹೊಸತೇನೂ ಅಲ್ಲ. ನಟ ಸುದೀಪ್ ಅವರ ನಿರ್ಧಾರದಿಂದ ಕನ್ನಡ ಚಿತ್ರರಂಗ ಹಾಗೂ ರಾಜಕೀಯದ ನಡುವಿನ ನಂಟು ಚರ್ಚೆಗೆ ಎಡೆ ಮಾಡಿದೆ.

    ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ ನಟ, ನಟಿಯರು ರಾಜಕೀಯದಲ್ಲೂ ತಮ್ಮ ವರ್ಚಸ್ಸು ಪ್ರಭಾವ ಬೀರಿರುವುದೂ ಸುಳ್ಳಲ್ಲ. ಆದರೆ, ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಷ್ಟು ಮಟ್ಟಿಗೆ ಕರ್ನಾಟಕದಲ್ಲಿ ಸಿನಿಮಾ ನಟರು ರಾಜಕೀಯ ರಂಗದಲ್ಲಿ ತಮ್ಮ ಛಾಪು ಮೂಡಿಸಿಲ್ಲ ಎಂಬುದೂ ಸುಳ್ಳಲ್ಲ.

    ತಮ್ಮ ಪಕ್ಷದ ವರ್ಚಸ್ಸು ವೃದ್ಧಿಸಿಕೊಳ್ಳಲು ರಾಜಕೀಯ ಪಕ್ಷಗಳು ಸಿನಿಮಾ ನಟ, ನಟಿಯರನ್ನು ಪಕ್ಷಕ್ಕೆ ಆಹ್ವಾನಿಸಿದರೆ, ಮತ್ತೆ ಕೆಲವೆಡೆ ಸಿನಿಮಾ ನಟರು ಸ್ವಹಿತಾಸಕ್ತಿಯಿಂದ ರಾಜಕೀಯ ಕ್ಷೇತ್ರಕ್ಕೆ ಧುಮುಕುತ್ತಾರೆ. ಕರ್ನಾಟಕದಲ್ಲೂ ಅಂತಹ ಹಲವಾರು ಪ್ರಯತ್ನಗಳು ನಡೆದಿವೆ. ಆದರೆ, ಇಲ್ಲಿ ದೇಶಾದ್ಯಂತ ಸಂಚಲನ ಮೂಡಿಸುವ ಮಟ್ಟದಲ್ಲಿ ಯಾವುದೇ ನಟ,ನಟಿಯರು ರಾಜಕೀಯದಲ್ಲಿ ಹೆಸರು ಮಾಡಿಲ್ಲ. ಚಿತ್ರರಂಗದಲ್ಲಿ ನಿರ್ವಪಕರಾಗಿ ಹೆಸರು ಮಾಡಿ ರಾಜಕೀಯ ಪ್ರವೇಶಿಸಿದ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಇತಿಹಾಸ.

    ಇನ್ನು ಮಂಡ್ಯ ಕ್ಷೇತ್ರದಿಂದ ಕಳೆದ ಬಾರಿ ಲೋಕಸಭೆ ಪ್ರವೇಶಿಸಿದ ನಟಿ ಸುಮಲತಾ ಚುನಾವಣಾ ಕಣವನ್ನೇ ರಂಗೇರಿಸಿದ್ದರು. ಪಕ್ಷೇತರಾಗಿ ಜಯಗಳಿಸಿ ಈಗ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಪತಿ ಅಂಬರೀಶ್ ಕೂಡ ಲೋಕಸಭೆ, ವಿಧಾನಸಭೆ ಪ್ರವೇಶಿಸಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯೂ ಆಗಿದ್ದರು. ವಿಚಿತ್ರವೆಂದರೆ, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿ ಚುನಾವಣೆಗೆ ಧುಮುಕುವ ನಟ, ನಟಿಯರು ತೀರಾ ಕಡಿಮೆ. ಕೆಲವೇ ಕೆಲವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಟಿಯರಾದ ತಾರಾ ಅನೂರಾಧ, ಶ್ರುತಿ, ಜಯಮಾಲಾ, ಮುಖ್ಯಮಂತ್ರಿ ಚಂದ್ರು ಅವರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಟಿ ಆರತಿ ವಿಧಾನ ಪರಿಷತ್​ನ ಸದಸ್ಯರಾಗಿದ್ದರು. ನಟ ಉಪೇಂದ್ರ ಪ್ರಜಾಕೀಯ ಪಕ್ಷವನ್ನೇ ಹುಟ್ಟು ಹಾಕಿ ರಾಜಕೀಯದಲ್ಲಿ ಹೊಸ ಮನ್ವಂತರ ಸೃಷ್ಟಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ನಟಿ ರಮ್ಯಾ ಕಾಂಗ್ರೆಸ್​ನಿಂದ ಸಂಸತ್ ಪ್ರವೇಶಿಸಿದ್ದರು. ನಟ ಬಿ.ಸಿ. ಪಾಟೀಲ್ ಜೆಡಿಎಸ್​ನಿಂದ ರಾಜಕೀಯ ಆರಂಭಿಸಿ ಕಾಂಗ್ರೆಸ್​ನಲ್ಲಿದ್ದು, ಈಗ ಬಿಜೆಪಿಯಲ್ಲಿದ್ದಾರೆ. ಸಚಿವರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಟಿ ರಕ್ಷಿತಾ ಬಿಎಸ್​ಆರ್ ಕಾಂಗ್ರೆಸ್​ನಲ್ಲಿದ್ದರು. ಬಳಿಕ ಜೆಡಿಎಸ್ ಸೇರಿದ್ದರು. ಈಗ ನೇಪಥ್ಯಕ್ಕೆ ಸರಿದಿದ್ದಾರೆ.

    ಮಾಳವಿಕಾ ಅವಿನಾಶ್ ಬಿಜೆಪಿಯಲ್ಲಿದ್ದಾರೆ. ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ನಟ ಜಗ್ಗೇಶ್ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಈಗ ರಾಜ್ಯಸಭೆ ಸದಸ್ಯರಾಗಿದ್ದಾರೆ. ನಟಿ ಉಮಾಶ್ರೀ ಕಾಂಗ್ರೆಸ್​ನಲ್ಲಿ ಕಳೆದ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಪೂಜಾ ಗಾಂಧಿ ಜೆಡಿಎಸ್, ಕೆಜೆಪಿ, ಬಿಎಸ್​ಆರ್ ಕಾಂಗ್ರೆಸ್​ನಲ್ಲಿದ್ದರು. ಈಗ ರಾಜಕೀಯದಿಂದ ದೂರು ಸರಿದಿದ್ದಾರೆ. ನಟ ಶಶಿಕುಮಾರ್ ಲೋಕಸಭೆ ಸದಸ್ಯರಾಗಿದ್ದರು. ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

    ಪ್ರಕಾಶ್​ರಾಜ್ ಸ್ವತಂತ್ರ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಲೋಕಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಕಾಂಗ್ರೆಸ್​ನಲ್ಲಿದ್ದ ಕುಮಾರ್ ಬಂಗಾರಪ್ಪ ಸಚಿವರಾಗಿದ್ದರು. ಈಗ ಬಿಜೆಪಿಯಲ್ಲಿದ್ದಾರೆ. ನಟ ಮಧು ಬಂಗಾರಪ್ಪ ಜೆಡಿಎಸ್​ನಲ್ಲಿ ಶಾಕರಾಗಿದ್ದರು. ಈಗ ಕಾಂಗ್ರೆಸ್ ಸೇರ್ಪಡೆಗೊಂಡು ಸೊರಬ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಜಾಗ್ವಾರ್ ಸಿನಿಮಾ ಖ್ಯಾತಿಯ ನಟ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷನಾಗಿದ್ದ ರಾಮನಗರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ಬಿಜೆಪಿಯಲ್ಲಿದ್ದಾರೆ. ಖ್ಯಾತ ನಟ ಅನಂತ್ ನಾಗ್ ಅವರು ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಸಚಿವರಾಗಿದ್ದರು. ಸಾಯಿಕುಮಾರ್ ಬಿಜೆಪಿಯಲ್ಲಿದ್ದಾರೆ. ಒಮ್ಮೆ ಚುನಾವಣೆಗೆ ನಿಂತು ಸೋತಿದ್ದಾರೆ. ನಟ ನೆ.ಲ.ನರೇಂದ್ರಬಾಬು ಕೂಡ ರಾಜಕೀಯ ರಂಗದಲ್ಲಿದ್ದಾರೆ.

    ನಟ ಆರೋಹಿತ ಗೌಡ ಆಮ್ ಆದ್ಮಿ ಪಕ್ಷದಲ್ಲಿದ್ದಾರೆ. ನಟಿ ರೂಪಾ ಅಯ್ಯರ್ ಜಯನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದಾರೆ. ನಟ ಶ್ರೀನಾಥ್ ವಿಧಾನ ಪರಿಷತ್ ಸದಸ್ಯರಾಗಿದ್ದರು. ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

    ರಾಜಕೀಯ ಒಪ್ಪದ ರಾಜ್

    ಪ್ರಧಾನಿಯಾಗಿದ್ದ ದಿ.ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ 1978ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ವರನಟ ಡಾ.ರಾಜಕುಮಾರ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿತ್ತು. ಆದರೆ ಡಾ.ರಾಜಕುಮಾರ್ ರಾಜಕೀಯ ಪ್ರವೇಶವನ್ನು ಸುತಾರಾಂ ಒಪ್ಪಲಿಲ್ಲ. ಹಾಗಾಗಿ ಇಂದಿರಾಗಾಂಧಿ ವಿರುದ್ಧ ಚಿತ್ರನಟರನ್ನು ಕಣಕ್ಕಿಳಿಸುವ ಪ್ರಯತ್ನ ಆಗ ವಿಫಲವಾಗಿತ್ತು.

    ಮಂಡ್ಯ ಕಣಕ್ಕೆ ಸಿನಿ ರಂಗು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ 2019ರಲ್ಲಿ ನಟಿ ಸುಮಲತಾ ಅಂಬರೀಶ್ ಸ್ಪರ್ಧಿಸಿದಾಗ ಯುವ ಹೃದಯ ಕದ್ದ ಜನಪ್ರಿಯ ನಟರಾದ ದರ್ಶನ್ ಮತ್ತು ಯಶ್ ಅವರು ಜೋಡೆತ್ತುಗಳಂತೆ ಪ್ರಚಾರ ಮಾಡಿ ಘಟಾನುಘಟಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದು ಇತಿಹಾಸ.

    ಸಿಎಂಗೆ ಸುದೀಪ್ ಬೆಂಬಲ: ನಟ ಸುದೀಪ್ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸಿದ್ದಾರೆ. ಅವರು ಹೇಳಿದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಿಕ್ತು ವಿಶೇಷ ಆಶೀರ್ವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts