

ಡಾ.ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ‘ಶಬ್ದವೇಧಿ’ ಬಿಡುಗಡೆಯಾಗಿ ಗುರುವಾರಕ್ಕೆ 22 ವರ್ಷಗಳಾಗಿವೆ. 2000ರ ಫೆ.10ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರಕ್ಕೂ ಮುನ್ನ ರಾಜಕುಮಾರ್ ಆರು ವರ್ಷಗಳ ಕಾಲ ಯಾವುದೇ ಚಿತ್ರದಲ್ಲೂ ನಟಿಸಿರಲಿಲ್ಲ. ಸೂಕ್ತ ಕಥೆಗಾಗಿ ಹುಡುಕಾಟ ನಡೆದಿದ್ದಾಗಲೇ, ಆಯ್ಕೆಯಾಗಿದ್ದು ವಿಜಯ್ ಸಾಸನೂರು ಅವರ ಅದೇ ಹೆಸರಿನ ಕಾದಂಬರಿ.
ಈ ಚಿತ್ರದಲ್ಲಿ ಡಾ. ರಾಜ್, ಸಂದೀಪ್ ಎಂಬ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಹಿರಿಯ ನಟಿ ಜಯಪ್ರದಾ ನಟಿಸಿದ್ದರು. ಇನ್ನು, ರಾಜ್ ಅವರ ತಾಯಿ ಪಾತ್ರದಲ್ಲಿ ಸಾಹುಕಾರ್ ಜಾನಕಿ ಇದ್ದರು. ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ, ಹಂಸಲೇಖ ಹಲವು ಜನಪ್ರಿಯ ಗೀತೆಗಳನ್ನು ಸಂಯೋಜಿಸಿದ್ದರು.
ಈ ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ಮೊದಲ ದಿನವೇ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಪ್ರದರ್ಶನ ನಿಂತಿತ್ತು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರಕ್ಕೆ ಹಾನಿ ಮಾಡಿದ್ದರು. ಕೆಲವು ದಿನಗಳ ನಂತರ ಅದೇ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಮುಂದುವರಿದು, 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು.