

ಬೆಂಗಳೂರು: ಒಂದು ಕಡೆ ಕನ್ನಡದಲ್ಲಿ ವರ್ಷದ ಮೊದಲಲ್ಲೇ ಒಂದೇ ಒಂದು ಚಿತ್ರ ಇಲ್ಲ ಎನ್ನುವ ಪರಿಸ್ಥಿತಿ ಇದ್ದರೆ, ಅತ್ತ ತೆಲುಗಿನಲ್ಲಿ ಒಂದೇ ವಾರ ಏಳು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ಈ ಪೈಕಿ ರಚಿತಾ ರಾಮ್ ಅಭಿನಯದ ಮೊದಲ ತೆಲುಗು ಚಿತ್ರ ‘ಸೂಪರ್ ಮಚ್ಚಿ’ ಸಹ ಒಂದು ಎನ್ನುವುದು ವಿಶೇಷ.
ಕರ್ನಾಟಕದಲ್ಲಿದ್ದಂತೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಯಾವುದೂ ಇಲ್ಲ. ಅಲ್ಲಿ ಪರಿಸ್ಥಿತಿ ಸಹಜವಾಗಿದ್ದು, ಶೇ. 100ರಷ್ಟು ಹಾಜರಾತಿಗೆ ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ, ಜ.7ಕ್ಕೆ ಬಿಡುಗಡೆಯಾಗಬೇಕಿದ್ದ ‘ಆರ್ಆರ್ಆರ್’ ಮತ್ತು ಜ.14ಕ್ಕೆ ಬಿಡುಗಡೆಯಾಗಬೇಕಿದ್ದ ‘ರಾಧೆ ಶ್ಯಾಮ್ ಎಂಬ ಎರಡು ದೈತ್ಯ ಚಿತ್ರಗಳಿಂದ ಸಣ್ಣ ಚಿತ್ರಗಳೆಲ್ಲ ಹೆದರಿ ಪಕ್ಕಕ್ಕಿದ್ದವು. ಎರಡೂ ಚಿತ್ರಗಳ ಬಿಡುಗಡೆ ಇದೀಗ ಮುಂದಕ್ಕೆ ಹೋಗಿವೆ. ಯಾವಾಗ ಈ ಚಿತ್ರಗಳು ಮುಂದಕ್ಕೆ ಹೋಗುತ್ತವೆ ಎಂದು ಗೊತ್ತಾಯಿತೋ, ಏಳು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ಏಳು ಚಿತ್ರಗಳ ಪೈಕಿ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಮತ್ತು ರಚಿತಾ ರಾಮ್ ಅಭಿನಯದ ‘ಸೂಪರ್ ಮಚ್ಚಿ’, ರಾಣಾ ದಗ್ಗುಬಾಟಿ ಅಭಿನಯದ ‘1945’, ಸಾಯಿಕುಮಾರ್ ಮಗ ಆದಿ ಸಾಯಿಕುಮಾರ್ ಅಭಿನಯದ ‘ಅತಿಥಿ ದೇವೋಭವ’, ನೇಹಾ ಶೆಟ್ಟಿ ನಟನೆಯ ‘ಡಿಜೆ ಟಿಲ್ಲು’, ‘ರೌಡಿ ಬಾಯ್್ಸ, ‘7 ಡೇಸ್ 6 ನೈಟ್ಸ್’ ಮತ್ತು ‘ಹೀರೋ’ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಅಲ್ಲಿಗೆ ಕನ್ನಡದಲ್ಲಿ ಒಂದೂ ಹೊಸ ಚಿತ್ರದ ಬಿಡುಗಡೆ ಇಲ್ಲದೆ ಅನಾವೃಷ್ಟಿಯಾದರೆ, ತೆಲುಗಿನಲ್ಲಿ ಅತಿವೃಷ್ಟಿ ಎನ್ನುವಂತಹ ಪರಿಸ್ಥಿತಿ ಇದೆ. ಏಳು ಚಿತ್ರಗಳು ಬಿಡುಗಡೆಯಾಗುವುದು ಹೊಸದಲ್ಲ. ಈ ಪೈಕಿ, ಎಷ್ಟು ಚಿತ್ರಗಳಿಗೆ ಜನರ ಪ್ರೋತ್ಸಾಹ, ಮೆಚ್ಚುಗೆ ಸಿಗುತ್ತದೆ ನೋಡಬೇಕು.
ನಾಳೆಯಿಂದ ಒಟಿಟಿಯಲ್ಲಿ ಪುಷ್ಪ: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’, ಡಿ.17ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗಿ ಗಳಿಕೆ ವಿಚಾರದಲ್ಲಿ ಹೊಸ ದಾಖಲೆ ಬರೆದಿತ್ತು. ಭಾರತದಲ್ಲೇ 300 ಕೋಟಿ ರೂ.ನಷ್ಟು ಸಂಪಾದನೆ ಈ ಚಿತ್ರ ಮಾಡಿದ್ದು, ಇದರಲ್ಲಿ ಹಿಂದಿ ಅವತರಣಿಕೆಯ ಪಾಲು 60 ಕೋಟಿ ರೂ.ನಷ್ಟಿದೆ. ಇದೀಗ ದೇಶದಲ್ಲಿ ಕೋವಿಡ್ ಕೇಸ್ಗಳ ಸಂಖ್ಯೆ ಹೆಚ್ಚಿದ್ದು, ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರವನ್ನು ಜ.07ಕ್ಕೆ ಅಮೇಜಾನ್ ಪ್ರೖೆಮ್ನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ. ಶುಕ್ರವಾರ ರಾತ್ರಿ ಎಂಟರಿಂದ ಸ್ಟ್ರೀಮಿಂಗ್ ಶುರುವಾಗಲಿದೆ.