ಯುಗಾಂತರದೊಂದಿಗೆ ಬಂದ ಸೇತುರಾಮ್; ಇದು ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳ ಕಥೆ

Yuganthara
Published on

‘ಮಂಥನ’, ‘ಅನಾವರಣ’ ಹಾಗೂ ‘ದಿಬ್ಬಣ’ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಎಸ್.ಎನ್. ಸೇತುರಾಮ್ ಈಗ ಹೊಚ್ಚ ಹೊಸ ಧಾರಾವಾಹಿಯೊಂದಿಗೆ ವಾಪಸ್ಸಾಗಿದ್ದಾರೆ. ಹಲವು ವರ್ಷಗಳ ಬ್ರೇಕ್ ಬಳಿಕ ಕಿರುತೆರೆಯಲ್ಲಿ ಹೊಸ ಕಥೆಯೊಂದರ ಮೂಲಕ ಜನರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಹೆಸರು, ‘ಯುಗಾಂತರ’.

ಒಬ್ಬ ಐಎಎಸ್ ಅಧಿಕಾರಿಯ ಮೂಲಕ ಸಮಾಜದ ಹದಗೆಟ್ಟ ವ್ಯವಸ್ಥೆ ಜತೆಗೆ ಕೌಟುಂಬಿಕ ಮೌಲ್ಯಗಳ ಕುರಿತ ಕಥೆ ಹೇಳಹೊರಟಿದ್ದಾರೆ ಸೇತುರಾಮ್ ಇತ್ತೀಚೆಗಷ್ಟೇ ಧಾರಾವಾಹಿಯ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧಾರಾವಾಹಿಗಳನ್ನು ಒಂದು ಕುಟುಂಬ ವ್ಯವಸ್ಥೆಯಿಂದ ಬೆಳೆಸುವುದು ಒಳ್ಳೆಯದು. ಅದು ಮುಖ್ಯವಾಗಲು ಕಾರಣ ಮನೆಯಲ್ಲಿ ಹೆಂಗಸರು, ಗಂಡಸರು ಎಲ್ಲರೂ ನೋಡುತ್ತಾರೆ. ಸದ್ಯಕ್ಕೆ 100 ಎಪಿಸೋಡ್​ಗಳನ್ನಷ್ಟೇ ಮಾಡಲು ಯೋಚಿಸಿದ್ದೇನೆ. ಈ ಹಿಂದೆ ಮೂರೂ ಧಾರಾವಾಹಿಗಳನ್ನು ಅರ್ಧ ಮಾಡಿಬಿಟ್ಟಿದ್ದೆ. ಹೀಗಾಗಿ ಈ ಧಾರಾವಾಹಿಯನ್ನು ಶುರು ಮಾಡಿ ಕೊನೆ ತೋರಿಸಬೇಕು ಅನ್ನೋ ಪ್ಯಾಷನ್ ಇದೆ. ನಂತರ ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಒಂದು ವರ್ಷದವರೆಗೂ ಹೋಗುವ ಯೋಚನೆ ಕೂಡ ಇದೆ’ ಎಂದು ‘ಯುಗಾಂತರ’ ಧಾರಾವಾಹಿಯ ಕುರಿತು ಮಾಹಿತಿ ನೀಡುತ್ತಾರೆ ಸೇತುರಾಮ್.

‘ಯುಗಾಂತರ’ ಧಾರಾವಾಹಿಯಲ್ಲಿ ನಟಿಸಿ, ನಿರ್ದೇಶಿಸುವುದರ ಜತೆಗೆ, ಕಥೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಕೂದಲು, ಮೀಸೆ ಬೆಳ್ಳಗಾಯಿತು ಈಗ 70 ವರ್ಷ ನನಗೆ, ಎಷ್ಟು ವರ್ಷ ಭವಿಷ್ಯ ನೋಡಲು ಸಾಧ್ಯ? ಬಹುಶಃ ಒಂದು ವರ್ಷ ಮಾಡುತ್ತೇನೆ ...’ ಎಂದು ನಗುತ್ತಾರೆ ಎಸ್.ಎನ್. ಸೇತುರಾಮ್. ಅಂದಹಾಗೆ ಇಂದಿನಿಂದಲೇ ಸಿರಿಕನ್ನಡ ವಾಹಿನಿಯಲ್ಲಿ ‘ಯುಗಾಂತರ’ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net