

ಬೆಂಗಳೂರು: ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿ, ಬಹುಕಾಲದ ಗೆಳೆಯ, ಉದ್ಯಮಿ ಸೋಮಶೇಖರ್ ಅವರನ್ನು ವರಿಸಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆದ ಅದ್ದೂರಿ ವಿವಾಹ ಕಾರ್ಯಕ್ರಮಕ್ಕೆ ಸೀಮಿತ ಜನರಿಗಷ್ಟೇ ಆಹ್ವಾನ ಇದ್ದ ಹಿನ್ನೆಲೆಯಲ್ಲಿ ಎರಡೂ ಕುಟುಂಬ ಮತ್ತು ಆಪ್ತವಲಯ ಮಾತ್ರ ಮದುವೆಯಲ್ಲಿ ಭಾಗವಹಿಸಿತ್ತು.
ಮದುವೆ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿತವಾಗಿತ್ತು. ಮೆಹೆಂದಿ, ಸಂಗೀತ್, ಬಳೆ ಶಾಸ್ತ್ರ, ಅರಿಶಿನ ಶಾಸ್ತ್ರ, ಆರತಕ್ಷತೆಯೂ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಧಾರಾವಾಹಿ ಬಳಗದವರೂ ಭಾಗವಹಿಸಿದ್ದರು. ಇದಕ್ಕೂ ಮುನ್ನ ಆಪ್ತರಿಗೆ ಬೆಚಲರೇಟ್ ಪಾರ್ಟಿ ಸಹ ಕೊಟ್ಟಿದ್ದರು.
ಕಳೆದ ಮೇ ತಿಂಗಳಿನಲ್ಲಿಯೇ ನಡೆಯಬೇಕಿದ್ದ ಈ ಮದುವೆ ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡುತ್ತಲೇ ಬಂದಿತ್ತು. ಇದೀಗ ತಡವಾಗಿಯಾದರೂ, ಶಾಸ್ತ್ರೆೊಕ್ತವಾಗಿ ಮದುವೆ ಮುಗಿಸಿಕೊಂಡಿದ್ದಾರೆ. ಬಂದ ಅತಿಥಿಗಳಿಗೆ ನೆನಪಿನ ಕಾಣಿಕೆ ರೀತಿಯಲ್ಲಿ ಸಸಿ ವಿತರಿಸಿದ್ದಾರೆ.