

ಬೆಂಗಳೂರು: ಪ್ರೇಮ್ ಅಭಿನಯದ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಟೀಸರ್ನಲ್ಲಿ ಗಮನಸೆಳೆಯುವವರ ಪೈಕಿ ನಾಯಕಿ ಬೃಂದಾ ಆಚಾರ್ಯ ಸಹ ಒಬ್ಬರು. ಈ ಹಿಂದೆ ಕಿರುತೆರೆಯಲ್ಲಿ ನಟಿಸಿದ್ದ ಬೃಂದಾ, ಈ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಚಿಕ್ಕಂದಿನಿಂದ ನಟನೆಯ ಬಗ್ಗೆ ಆಸಕ್ತಿ ಹೊಂದಿದ ಬೃಂದಾಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಕಾಳಿ’ ಧಾರಾವಾಹಿಯ ಆಡಿಶನ್ ನಡೆಯುತ್ತಿದೆ ಎಂದು ತಿಳಿಯಿತಂತೆ. ‘ಆಡಿಶನ್ನಲ್ಲಿ ಪಾಸ್ ಆಗಿ, ಆ ಧಾರಾವಾಹಿಯಲ್ಲಿ ರತಿಯ ಪಾತ್ರ ಮಾಡಿದ್ದೆ. ಅದೊಂದು ಚಿಕ್ಕ ಪಾತ್ರ. ನನ್ನ ಅಭಿನಯ ನೋಡಿ, ನಿರ್ದೇಶಕ ರಾಘವೇಂದ್ರ ಹೆಗ್ಡೆ ಅವರು ‘ಶನಿ’ ಧಾರಾವಾಹಿಯಲ್ಲಿ ದೊಡ್ಡ ಪಾತ್ರ ಕೊಟ್ಟರು. ಅಷ್ಟರಲ್ಲಿ, ‘ಪ್ರೇಮಂ ಪೂಜ್ಯಂ’ ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆ ನಡೆಯುತ್ತಿದೆ ಎಂದು ಗೊತ್ತಾಯಿತು. ಫೋಟೋ ಕಳಿಸಿಕೊಟ್ಟೆ. ನಿರ್ದೇಶಕ ರಾಘವೇಂದ್ರ ಭೇಟಿಯಾಗಿ ಕಥೆ ಹೇಳಿದರು. ಅವರು ಹೇಳಿದ ಶೈಲಿಗೆ ಬೋಲ್ಡ್ ಆಗಿದ್ದೆ. ಅದ್ಭುತವಾದ ಕಥೆ. ತಕ್ಷಣವೇ ಒಪ್ಪಿಕೊಂಡೆ’ ಎನ್ನುತ್ತಾರೆ ಬೃಂದಾ.
ಇದೊಂದು 20 ವರ್ಷಗಳ ಪ್ರೀತಿಯ ಕಥೆ ಎನ್ನುತ್ತಾರೆ ಅವರು. ‘ಇಲ್ಲಿ 20 ವರ್ಷಗಳ ಪ್ರೀತಿಯ ಪ್ರಯಾಣವಿದೆ. ಅದರ ಜತೆಗೆ ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಇದೇ ಮೊದಲ ಬಾರಿಗೆ ವಿಯಟ್ನಾಂನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದರ ಜತೆಗೆ ಬೆಂಗಳೂರು, ಊಟಿ, ಮುನ್ನಾರ್, ಡಾರ್ಜಲಿಂಗ್, ಧರ್ಮಶಾಲಾದ ಸುಂದರ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರ ಬಹಳ ಚೆನ್ನಾಗಿ ಬಂದಿದ್ದು, ಬಹಳ ನಿರೀಕ್ಷೆ ಇದೆ’ ಎನ್ನುತ್ತಾರೆ. ಸರಿ, ಮುಂದಾ? ಆ ಬಗ್ಗೆ ಇನ್ನೂ ಬೃಂದಾಗೆ ಸ್ಪಷ್ಟತೆ ಇಲ್ಲ ಅಥವಾ ಹೇಳುವುದಿಲ್ಲ. ಕೆಲಸಕ್ಕೆ ಗುಡ್ಬೈ ಹೇಳಿ, ಪೂರ್ಣಪ್ರಮಾಣದಲ್ಲಿ ನಟನೆಯನ್ನು ಆಯ್ಕೆ ಮಾಡಿಕೊಂಡಿರುವ ಬೃಂದಾ, ಒಂದಿಷ್ಟು ಕಥೆಗಳನ್ನು ಕೇಳಿದ್ದಾರಂತೆ.