

ಹೈದರಾಬಾದ್: ಮದುವೆ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ದುಬೈ ಭೇಟಿ ನೀಡಿ ಬಂದಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು. ನರೇಶ್ ಅವರು ತಮ್ಮ ಟ್ವಿಟರ್ನಲ್ಲಿ ಮದುವೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಪವಿತ್ರಾ ಲೋಕೇಶ್ ಮತ್ತು ನರೇಶ್ ಕೆಲವೇ ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ, ಸಪ್ತಪದಿ ತುಳಿದು ಮದುವೆ ಆಗಿರುವ ದೃಶ್ಯ ವಿಡಿಯೋದಲ್ಲಿತ್ತು. ಈ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆ ಸಹ ಹುಟ್ಟು ಹಾಕಿದೆ. ಇಬ್ಬರು ನಿಜವಾಗಿಯೂ ಮದುವೆ ಆಗಿದ್ದಾರಾ ಅಥವಾ ಇದೊಂದು ಸಿನಿಮಾ ಗಿಮಿಕ್ ಇರಬಹುದಾದ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.
ನರೇಶ್ಗೆ ಇದು ನಾಲ್ಕನೇ ಮದುವೆಯಾದರೆ, ಪವಿತ್ರಾ ಲೋಕೇಶ್ಗೆ ಇದು ಮೂರನೇ ಮದುವೆ. ಯಾವಾಗ ಮದುವೆ ವಿಡಿಯೋ ಹೊರಬಂತೋ ಎಲ್ಲಡೆ ಈ ಬಗ್ಗೆ ಚರ್ಚೆಯಾಗುತ್ತಿದ್ದು, ಇದೀಗ ಮದುವೆ ವಿಚಾರದ ಬಗ್ಗೆ ಪವಿತ್ರಾ ಲೋಕೇಶ್ ಅವರ ಮಾಜಿ ಪತಿ ಸುಚೇಂದ್ರ ಪ್ರಸಾದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮದವರು ಮದುವೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಪವಿತ್ರಾ ಲೋಕೇಶ್ ಅವರ ವಿರುದ್ಧ ಸುಚೇಂದ್ರ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ತನ್ನ ಪ್ಲಾನ್ ಪ್ರಕಾರವೇ ಪವಿತ್ರಾ ಲೋಕೇಶ್, ನರೇಶ್ ಅವರನ್ನು ಮದುವೆ ಆಗಿದ್ದಾರಂತೆ. ಇಷ್ಟೇ ಅಲ್ಲದೆ, ಐಷಾರಾಮಿ ಜೀವನಕ್ಕಾಗಿ ಆಕೆ ಏನು ಬೇಕಾದರೂ ಮಾಡುತ್ತಾಳಂತೆ. ಆಸ್ತಿಗೋಸ್ಕರ ನರೇಶ್ ಜೊತೆ ಪ್ರೀತಿಯ ನಾಟಕವಾಡುತ್ತಿದ್ದಾಳೆ ಮತ್ತು ಆಕೆಗೆ ಹಣದಾಹವಿದೆ ಎಂದು ಆರೋಪ ಮಾಡಿದ್ದಾರೆ.
ಈ ಹಿಂದೆಯೂ ಹಣಕ್ಕಾಗಿ ಆಕೆ ಡಿವೋರ್ಸ್ ಮಾಡಿಕೊಂಡಿದ್ದಾಳೆ. 1500 ಕೋಟಿ ರೂ. ಆಸ್ತಿಯನ್ನು ಕಬಳಿಸಲು ನರೇಶ್ ಜೊತೆ ಸಲುಗೆ ಬೆಳೆಸಿಕೊಂಡಿದ್ದಾಳೆ. ನರೇಶ್ ಆಕೆಯ ಬಗ್ಗೆ ಪೂರ್ತಿಯಾಗಿ ಅರ್ಥ ಮಾಡಿಕೊಂಡಿಲ್ಲ. ಶೀಘ್ರದಲ್ಲೇ ನರೇಶ್ಗೆ ಬಗ್ಗೆ ಪವಿತ್ರಾ ಲೋಕೇಶ್ ಬಗ್ಗೆ ಅರಿವಾಗಲಿದೆ ಎಂದು ಸುಚೇಂದ್ರ ಪ್ರಸಾದ್ ಹೇಲಿದ್ದಾರೆ.
ಕಳೆದ ವಾರ ನರೇಶ್ ಅವರು ಇಂತಿಂತಿ ರಾಮಾಯಣಂ ಸಿನಿಮಾ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮದುವೆ ಬಗ್ಗೆ ಅವರನ್ನು ಕೇಳಲಾಯಿತು. ಆದರೆ, ಅದರ ಬಗ್ಗೆ ಮಾತನಾಡಲು ನರೇಶ್ ಇಷ್ಟಪಡಲಿಲ್ಲ. ಬದಲಾಗಿ ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದರು. ನನ್ನ ವೈಯಕ್ತಿಕ ಜೀವನದ ಸಂಗತಿಗಳನ್ನು ಸಿನಿಮಾ ವೇದಿಕೆ ಮೇಲೆ ಮಾತನಾಡಲು ಬಯಸುವುದಿಲ್ಲ. ಶೀಘ್ರದಲ್ಲೇ ಪತ್ರಿಕಾಗೋಷ್ಠಿಯಲ್ಲಿ ನಾನು ಖಂಡಿತವಾಗಿಯೂ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತೇನೆ. ನಾನು ಯಾವಾಗಲೂ ಮಾಧ್ಯಮ ಸ್ನೇಹಿ ಕಲಾವಿದ. ಪ್ರತಿಯೊಬ್ಬರಿಗೂ ರೀಲ್ ಲೈಫ್ ಮತ್ತು ರಿಯಲ್ ಲೈಫ್ ಇರುತ್ತದೆ ಎಂದು ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಈ ಸಿನಿಮಾ ಈವೆಂಟ್ ಅನ್ನು ಬೇರೆ ವಿಷಯಗಳಿಗೆ ತಿರುಗಿಸಲು ನಾನು ಬಯಸುವುದಿಲ್ಲ ಎಂದು ನರೇಶ್ ತಿಳಿಸಿದರು. (ಏಜೆನ್ಸೀಸ್)