

ಅಹಮದಾಬಾದ್: ಗುಜರಾತಿನ ಪೊಲೀಸ್ ಅಧಿಕಾರಿಯೊಬ್ಬರು ಮಾಡಿದ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊನೇ ಸಮಯದಲ್ಲಿ ಪರೀಕ್ಷೆಯಿಂದ ವಂಚಿತಳಾಗುತ್ತಿದ್ದ ವಿದ್ಯಾರ್ಥಿನಿಗೆ ನೆರವಾಗುವ ಮೂಲಕ ಪೊಲೀಸ್ ಅಧಿಕಾರಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ.
ವಿವರಣೆಗೆ ಬರುವುದಾದರೆ, ವಿದ್ಯಾರ್ಥಿನಿಯು ಬೋರ್ಡ್ ಪರೀಕ್ಷೆ ಎದುರಿಸಬೇಕಿತ್ತು. ಆದರೆ, ಪರೀಕ್ಷೆಯ ದಿನ ಆಕೆಯ ತಂದೆ ಆತುರದಲ್ಲಿ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿದ್ದರು. ಇದಾದ ಬಳಿಕ ವಿದ್ಯಾರ್ಥಿನಿ ತನ್ನ ರೋಲ್ ನಂಬರ್ಗಾಗಿ ಹುಡುಕಾಡಿದ್ದಾಳೆ. ನಾನು ತಪ್ಪಾದ ಪರೀಕ್ಷಾ ಕೇಂದ್ರದಲ್ಲಿದ್ದೇನೆ ಎಂಬುದು ಸಹ ಆ ವಿದ್ಯಾರ್ಥಿನಿಗೆ ಗೊತ್ತಿರಲಿಲ್ಲ. ಎಷ್ಟೇ ಹುಡುಕಾಡಿದರೂ ನಂಬರ್ ಸಿಗದೇ ಅಸಹಾಯಕಳಾಗಿದ್ದ ಆಕೆಯನ್ನು ಹತ್ತಿರದಲ್ಲೇ ಇದ್ದ ಪೊಲೀಸ್ ಅಧಿಕಾರಿ ನೋಡುತ್ತಾರೆ. ಸಮೀಪ ಹೋಗಿ ಪರಿಶೀಲಿಸಿದಾಗ ಆಕೆ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಂದಿರುವುದು ತಿಳಿಯುತ್ತದೆ ಮತ್ತು ಆಕೆ ಪರೀಕ್ಷೆಯಿಂದ ವಂಚಿತಳಾಗಬಹುದು ಎಂದು ಭಾವಿಸುತ್ತಾರೆ.
ವಿದ್ಯಾರ್ಥಿನಿಯನ್ನು ಹಾಲ್ ಟಿಕೆಟ್ ತೋರಿಸುವಂತೆ ಪೊಲೀಸ್ ಅಧಿಕಾರಿ ಕೇಳುತ್ತಾರೆ. ಹಾಲ್ ಟಿಕೆಟ್ ನೋಡಿದಾಗ ಪರೀಕ್ಷಾ ಕೇಂದ್ರ 20 ಕಿ.ಮೀ ದೂರದಲ್ಲಿರುವುದು ಗೊತ್ತಾಗುತ್ತದೆ. ತಕ್ಷಣ ವಿದ್ಯಾರ್ಥಿನಿಯ ನೆರವಿಗೆ ಬಂದ ಪೊಲೀಸ್ ಅಧಿಕಾರಿ ಆಕೆಯನ್ನು ತನ್ನ ಸರ್ಕಾರಿ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಿಡುಲು ನಿರ್ಧರಿಸುತ್ತಾರೆ.
ಬಳಿಕ ಸೈರನ್ ಆನ್ ಮಾಡುವ ಪೊಲೀಸ್ ಅಧಿಕಾರಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಬಿಡುತ್ತಾರೆ.
ಇದಿಷ್ಟು ಘಟನೆ ಗುಜರಾತ್ನಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಹಾಗೂ ವಿದ್ಯಾರ್ಥಿನಿಯ ಫೋಟೋವನ್ನು ಆದರ್ಶ್ ಹೆಗ್ಡೆ ಎಂಬುವರು ರಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಮಾನವೀಯ ಕಾರ್ಯವನ್ನು ವಿವರಿಸಿದ ಬಳಿಕ ಹೆಗ್ಡೆ ಅವರು ಅಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ. ನಮ್ಮ ಸಮಾಜದಲ್ಲಿ ಅನೇಕ ಒಳ್ಳೆಯ ಪೊಲೀಸ್ ಅಧಿಕಾರಿಗಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘಟನೆ ಯಾವಾಗ ನಡೆಯಿತು ಎಂಬುದರ ಸುಳಿವು ಇಲ್ಲ. ಆದರೆ, ಜಾಲತಾಣದಲ್ಲಿ ಮಾತ್ರ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಸಮಯ ಪ್ರಜ್ಞೆಗೆ ನೆಟ್ಟಿಗರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)