More

    ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ

    ಶೇ.94 ಫಲಿತಾಂಶದೊಂದಿಗೆ ಅಗ್ರಸ್ಥಾನ — 17ರಿಂದ ಮೊದಲ ಹಂತಕ್ಕೆ ಜಂಪ್

    ಪ್ರಶಾಂತ ಭಾಗ್ವತ, ಉಡುಪಿ
    ಕಳೆದ ವರ್ಷ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶದಿಂದ ಕಳೆಗುಂದಿದ್ದ ಉಡುಪಿ ಜಿಲ್ಲೆ, ಈ ಬಾರಿಯ ಫಲಿತಾಂಶದಲ್ಲಿ ತನ್ನ ಜ್ಞಾನಪ್ರೌಢಿಮೆ ಮೆರೆದಿದೆ. ಶೇ.89.33 ಫಲಿತಾಂಶದೊಂದಿಗೆ 17ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆ, 2024ರಲ್ಲಿ ಶೇ. 94 ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.

    2023ರ ಹೀನಾಯ ಫಲಿತಾಂಶವವನ್ನೇ ಸವಾಲಾಗಿ ಸ್ವೀಕರಿಸಿದ್ದ ‘ಜ್ಞಾನಕಾಶಿ’ ಖ್ಯಾತಿಯ ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆ, ಶಾಲೆ ಆರಂಭದ ಮೊದಲ ದಿನದಿಂದಲೇ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿತ್ತು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಷ್ಟೇ ಅಲ್ಲದೆ, ಪಾಲಕರನ್ನೂ ಸಹ ಒಳಗೊಂಡು ‘ಜ್ಞಾನಾರ್ಜನೆಯ ಯಾಗ’ವನ್ನೇ ಮಾಡಲಾಗಿತ್ತು.

    ವಿಶೇಷ ತರಗತಿ

    ಕಳೆದ ವರ್ಷ ಜೂನ್​ ತಿಂಗಳಲ್ಲಿ ಶಾಲೆ ಆರಂಭವಾದಾಗಲೇ ಎಸ್​ಎಸ್​ಎಲ್​ಸಿ ಮಕ್ಕಳಿಗೆ ವಿಶೇಷ ತರಗತಿ, ಪ್ರತಿದಿನ ಯುನಿಟ್​ ಟೆಸ್ಟ್​, ಕಲಿಕೆಯಲ್ಲಿ ಹಿಂದುಳಿದವರಿಗೆ ಸಂಜೆ ಕ್ಲಾಸ್​, ಪ್ರತಿ ತಿಂಗಳೂ ತಾಯಿಂದಿರ ಸಭೆ ನಡೆಸಿ ಮಕ್ಕಳ ಕಲಿಕಾ ಮಟ್ಟದ ಮಾಹಿತಿ ನೀಡಲಾಗುತ್ತಿತ್ತು. ಅಲ್ಲದೆ, ಕಳೆದ ಫೆಬ್ರವರಿಯಿಂದ ಜಿಪಂನಲ್ಲಿರುವ ಸ್ಟುಡಿಯೋ ಮೂಲಕ ದಿನವೂ ಒಂದು ವಿಷಯದ ಕುರಿತು ಲೈವ್​ ಮೂಲಕ ಮಾಹಿತಿ ನೀಡಲಾಗುತ್ತಿತ್ತು.

    ಶಿಕ್ಷಕರ ಕಾರ್ಯಾಗಾರ

    ಮೂರು ಹಂತದಲ್ಲಿ ಮಕ್ಕಳಿಗೆ ಪ್ರೇರಣಾ ಶಿಬಿರ, 40ಕ್ಕಿಂತ ಕಡಿಮೆ ಅಂಕ ಗಳಿಸುವ ಮಕ್ಕಳನ್ನು ಗುರುತಿಸಿ ವಿಷಯ ಶಿಕ್ಷಕರಿಂದ ವಿಶೇಷ ಬೋಧನೆ ಮಾಡಿಸಲಾಗಿತ್ತು. ಅದಕ್ಕೆಂದೇ ಶಿಕ್ಷಕರ ಕಾರ್ಯಾಗಾರ ನಡೆಸಲಾಗಿತ್ತು. ನಿಗದಿತ ದಿನದಂದು ಬಿಇಒ, ಡಿಡಿಪಿಐ ಸಹಿತವಾಗಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮನೆಗೇ ಭೇಟಿ ನೀಡಿ, ಮಕ್ಕಳ ದಿನದ ಅಭ್ಯಾಸದ ಕುರಿತಂತೆ ಪರಿಶೀಲಿಸಿದ್ದರು. ಟಿವಿ-ಮೊಬೈಲ್​ ಎಷ್ಟು ಸಮಯ ಬಳಕೆ ಮಾಡುತ್ತಿದ್ದಾರೆ ಎಂಬ ವಿಚಾರವನ್ನೂ ತಿಳಿದು, ಟೈಮ್​ ಟೇಬಲ್​ ಹಾಕಿಸಿ ಓದಿನತ್ತ ಗಮನ ನೀಡುವಂತೆ ಮಾಡಿದ್ದರು.

    ಅಣಕು ಪರೀಕ್ಷೆ

    ಸತತ 10 ತಿಂಗಳ ಕಾಲ ಮಕ್ಕಳ ಶೈಕ್ಷಣಿಕ ವೃದ್ಧಿಗೆ ತೊಡಗಿಸಿಕೊಂಡ ಜಿಲ್ಲಾ ಶಿಕ್ಷಣ ಇಲಾಖೆ, ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಕಳೆದ ಮಾ.14ರಂದು ಅಣಕು ಪರೀಕ್ಷೆಯನ್ನೂ ಮಾಡಿತ್ತು. ಯಾವ ಶಾಲೆಯಲ್ಲಿ ಅಂತಿಮ ಪರೀಕ್ಷೆ ಬರೆಯುತ್ತಾರೋ ಅದೇ ಶಾಲೆಯಲ್ಲಿ ಕಠಿಣ ವಿಷಯಗಳಾದ ಗಣಿತ, ಇಂಗ್ಲಿಷ್​ ಹಾಗೂ ವಿಜ್ಞಾನದ ಅಣಕು ಪರೀಕ್ಷೆ ಆಯೋಜಿಸಿ, ಮಕ್ಕಳಲ್ಲಿರುವ ಭಯ ನಿವಾರಿಸಿತ್ತು.

    9 ವರ್ಷದ ಬಳಿಕ ಅಗ್ರಪಟ್ಟ

    26 ವರ್ಷದ ಹಿಂದೆ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ 2023ರ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ್ದ ಉಡುಪಿ ಈ ಬಾರಿ ಮತ್ತೆ ತನ್ನ ಪ್ರಾಬಲ್ಯ ತೋರ್ಪಡಿಸಿದೆ. 2015ರಿಂದ 2018ರ ವರೆಗೆ ಸತತವಾಗಿ ರಾಜ್ಯದಲ್ಲಿ ಅಗ್ರಸ್ಥಾನ ಗಳಿಸಿ, 2016ರಲ್ಲಿ ಎರಡನೇ ಸ್ಥಾನಕ್ಕೆ ಜಾರಿತ್ತು. ಉಳಿದ ಮೂರು ವರ್ಷ ರಾಜ್ಯದಲ್ಲಿ ಟಾಪ್​ ಇತ್ತು. 2019ರಲ್ಲಿ ಶೇ. 89.49 ಫಲಿತಾಂಶದೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆ ನಂತರ ಮೇಲಕ್ಕೇರಲೇ ಇರಲಿಲ್ಲ. 2020ರಿಂದ 2022ರ ವರೆಗೆ ಕೋವಿಡ್​-19 ಕಾರಣದಿಂದ ಗ್ರೇಡ್​ ನೀಡುವಾಗಲೂ ಸಹ 9 ಹಾಗೂ 13ನೇ ಸ್ಥಾನದಲ್ಲಿತ್ತು. 2023ರಲ್ಲಿ 17ನೇ ಸ್ಥಾನಕ್ಕೆ ಕುಸಿದಿತ್ತು.

    13,246 ಮಕ್ಕಳು ತೇರ್ಗಡೆ

    2024ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ 7,254 ವಿದ್ಯಾರ್ಥಿಗಳು ಹಾಗೂ 6,764 ವಿದ್ಯಾರ್ಥಿನಿಯರು ಸೇರಿ ಒಟ್ಟು 14,018 ಮಕ್ಕಳು ಎಕ್ಸಾಂಗೆ ನೋಂದಣಿ ಮಾಡಿದ್ದರು. ಅದರಲ್ಲಿ 6,659 ವಿದ್ಯಾರ್ಥಿಗಳು ಹಾಗೂ 6,587 ವಿದ್ಯಾರ್ಥಿನಿಯರು ಸೇರಿ ಒಟ್ಟು 13,246 ಮಕ್ಕಳು ತೇರ್ಗಡೆ ಹೊಂದಿದ್ದು, ಶೇ. 94 ಫಲಿತಾಂಶದೊಂದಿಗೆ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.

    1,042 ಮಕ್ಕಳು ಫೇಲ್

    ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳ ಪೈಕಿ 865 ಗಂಡು ಮಕ್ಕಳು ಹಾಗೂ 177 ಹೆಣ್ಣು ಮಕ್ಕಳು ಸೇರಿ ಒಟ್ಟು 1,042 ಮಕ್ಕಳು ಅನುತ್ತೀರ್ಣರಾಗಿದ್ದಾರೆ.

    ಗಮನ ಸೆಳೆದ ಸಹನಾ ನಾಯ್ಕ್​

    ಫಲಿತಾಂಶದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದರೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಲೆಕ್ಕಾಚಾರದಲ್ಲಿ (ಟಾಪರ್ಸ್​) ಉಡುಪಿಗೆ ಮೂರನೇ ಸ್ಥಾನ ಲಭಿಸಿದೆ. ಕಾರ್ಕಳದ ಜನಸುಧಾ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ವಿದ್ಯಾರ್ಥಿನಿ, ಶಂಕರ್​ ನಾಯ್ಕ್​ ಹಾಗೂ ಪ್ರಭಾಕುಮಾರಿ ದಂಪತಿ ಪುತ್ರಿ ಸಹನಾ ಎನ್​., 625/623 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಪುತ್ರಿಯ ಸಾಧನೆಗೆ ಪಾಲಕರೂ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

    98 ಶಾಲೆಗಳಲ್ಲಿ ಶೇ.100 ಫಲಿತಾಂಶ

    ಉಡುಪಿ ಜಿಲ್ಲೆಯಲ್ಲಿ ಒಟ್ಟು 315 ಪ್ರೌಢಶಾಲೆಗಳಿವೆ. ಅದರಲ್ಲಿ 105 ಸರ್ಕಾರಿ ಶಾಲೆ, 70 ಅನುದಾನಿತ ಹಾಗೂ 140 ಅನುದಾನ ರಹಿತ ಪ್ರೌಢಶಾಲೆಗಳಿವೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 28 ಸರ್ಕಾರಿ ಶಾಲೆ, 70 ಅನುದಾನಿತ ಹಾಗೂ 49 ಅನುದಾನ ರಹಿತ ಪ್ರೌಢಶಾಲೆ ಸೇರಿ ಜಿಲ್ಲೆಯಲ್ಲಿ ಒಟ್ಟು 98 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಗಮನ ಸೆಳೆದಿದೆ.

    2015ರಿಂದ 2023ರ ವರೆಗಿನ ವಿವರ

    ವರ್ಷಫಲಿತಾಂಶ(ಶೇ)ಸ್ಥಾನ
    2015 — 93.37 — 1
    2016 — 89.64 — 2
    2017 — 84.23 — 1
    2018 — 88.30 — 1
    2019 — 89.49 — 5
    2020 — 86.48 — 9
    2021 — 100 — –
    2022 — 89.46 — 13
    2023 — 91.00 — 17

    ಇದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮದ ಲ. ಜಿಲ್ಲೆ ಪ್ರಥಮ ಸ್ಥಾನಕ್ಕೇರಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಎಲ್ಲ ಶಿಕ್ಷಕರು ಬದ್ಧತೆಯಿಂದ ತಮ್ಮ ಶಾಲೆಯ ಲಿತಾಂಶ ಹೆಚ್ಚಳಕ್ಕೆ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದರು. ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮಗಳಿಗೆ ಮಕ್ಕಳೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಪ್ರಥಮ ಸ್ಥಾನ ಸಾಧ್ಯವಾಗಿದೆ. ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು.

    ಗಣಪತಿ ಕೆ.
    ಡಿಡಿಪಿಐ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts