

ಬೆಂಗಳೂರು: ಹಿರಿಯ ನಟ, ರಂಗಕರ್ಮಿ ಎಚ್.ಜಿ.ಸೋಮಶೇಖರರಾಯರು (86) ನಿಧನರಾಗಿದ್ದಾರೆ, ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಶ್ರೀನಗರದಲ್ಲಿ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ನಿಧನರಾದರು. ಹೂಮಳೆ, ನಂ. 27 ಮಾವಳ್ಳಿ ಸರ್ಕಲ್, ಹರಕೆಯ ಕುರಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸೋಮಶೇಖರ್ ರಾಯರು, ಕನ್ನಡದ ಮತ್ತೋರ್ವ ಹಿರಿಯ ನಟ ದತ್ತಣ್ಣ ಅವರ ಸಹೋದರ. ಹರಕೆಯ ಕುರಿ ಚಿತ್ರದಲ್ಲಿ ಈ ಇಬ್ಬರು ಸಹೋದರರು ಒಟ್ಟಿಗೆ ನಟಿಸಿದ್ದರು.
ಎಚ್.ಜಿ.ಸೋಮಶೇಖರರಾಯರು ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದವರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕರ್ತೃಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದವರು. 1981ರಲ್ಲಿ ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.
ಇದನ್ನೂ ಓದಿ: ಸಂಜನಾ, ರಾಗಿಣಿಗೆ ಸಿಗುತ್ತಾ ಬೇಲ್?
ರವಿ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಇವರ ಅಭಿನಯ ಸಾಮರ್ಥ್ಯವನ್ನು ಗುರುತಿಸುವಂತೆ ಮಾಡಿತು. ರವಿಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾಯರು ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ಕೆನರಾ ಬ್ಯಾಂಕ್ನಲ್ಲಿ ಉನ್ನತ ಅಧಿಕಾರಿಯಾಗಿ ನಿವೃತ್ತಿ ಹೊಂದಿ ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.