More

    ಸಲೂನ್ ಗರ್ಲ್ ಕಾರುಣ್ಯಾ ರಾಮ್; ಪೆಟ್ರೋಮ್ಯಾಕ್ಸ್​ನಲ್ಲಿ ವಿಶೇಷ ಪಾತ್ರ..

    ಬೆಂಗಳೂರು: ಗ್ಲಾಮರಸ್ ಅವತಾರಗಳ ಮೂಲಕವೇ ಹೆಚ್ಚು ಕಾಣಿಸಿಕೊಂಡ ನಟಿ ಕಾರುಣ್ಯಾ ರಾಮ್ ಇದೀಗ, ಬೇರೆ ಮಗ್ಗುಲಿಗೆ ಹೊರಳಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ವಿಭಿನ್ನತೆಯ ಮೊರೆ ಹೋಗಿದ್ದಾರೆ. ಇಲ್ಲಿಯವರೆಗೂ ಕಾಣಿಸಿಕೊಳ್ಳದ ಪಾತ್ರವೊಂದನ್ನು ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಪೋಷಿಸುತ್ತಿದ್ದಾರೆ. ಅದೇ ಸಲೂನ್ ಗರ್ಲ್!

    ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಶುರುವಾಗಿದೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಮುಹೂರ್ತ ಮುಗಿಸಿಕೊಂಡಿದ್ದ ಚಿತ್ರ ಅದೇ ಊರಲ್ಲಿ ಚಿತ್ರದ ಅರ್ಧ ಭಾಗದ ಶೂಟಿಂಗ್ ಸಹ ಮುಗಿಸಿಕೊಂಡಿದೆ. ಸತೀಶ್ ನೀನಾಸಂ, ಹರಿಪ್ರಿಯಾ ಇರುವ ಈ ಚಿತ್ರದಲ್ಲಿ ಕಾರುಣ್ಯಾ, ಸಲೂನ್ ಗರ್ಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

    ಆ ಪಾತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ವಿಜಯ್ ಪ್ರಸಾದ್,‘ಅನಾಥಾಶ್ರಮದಲ್ಲಿ ಬೆಳೆದು ಸಲೂನ್​ನಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಕಾರುಣ್ಯಾ ಕಾಣಿಸಿಕೊಂಡಿದ್ದಾರೆ. ಆಕೆಗೆ ಅಗಾಧವಾದ ಜೀವನಪ್ರೀತಿ. ಏನಾದರೊಂದು ಮಾಡಬೇಕು, ಎಲ್ಲರಂತೆ ಓದಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಛಲದವಳು. ಚಿತ್ರದಲ್ಲಿ ಅವರ ಪಾತ್ರ ತುಂಬ ವಿಶೇಷವಾಗಿದೆ’ ಎಂದು ಪಾತ್ರದ ಒಂದೆಳೆ ಬಿಚ್ಚಿಡುತ್ತಾರೆ.

    ಇನ್ನು ಸಿನಿಮಾ ಬಗ್ಗೆ ಹೆಚ್ಚು ಮಾತನಾಡುವ ಬದಲು, ವಿಜಯ್ ಪ್ರಸಾದ್ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ ಕಾರುಣ್ಯಾ. ‘ವಿಜಯ್ ಪ್ರಸಾದ್ ಸಿನಿಮಾಗಳನ್ನು ನೋಡುತ್ತ ಬಂದಿದ್ದೇನೆ. ಮಾನವೀಯ ಮೌಲ್ಯಗಳು ಮತ್ತು ಒಂದಷ್ಟು ಭಾವುಕ ಸಂಗತಿಗಳನ್ನು ಅವರ ಸಿನಿಮಾದಲ್ಲಿ ಅಳವಡಿಸಿರುತ್ತಾರೆ. ಇಲ್ಲಿಯೂ ಅಂಥ ಅಂಶಗಳೇ ಇವೆ. ಈವರೆಗೂ ಮಾಡಿದ ಪಾತ್ರಗಳಿಗಿಂತ ವಿಭಿನ್ನ ರೋಲ್ ಈ ಚಿತ್ರದಲ್ಲಿ ನನಗೆ ಸಿಕ್ಕಿದೆ’ ಎನ್ನುತ್ತಾರೆ.

    ಇನ್ನು ಈಗಾಗಲೇ ಅರ್ಧ ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ನಿರ್ದೇಶಕರು, ನವೆಂಬರ್ ಮೂರನೇ ವಾರದಲ್ಲಿ ಮೈಸೂರಿನಲ್ಲಿ 20 ದಿನಗಳ ಎರಡನೇ ಹಂತದ ಶೂಟಿಂಗ್ ಶುರು ಮಾಡಲಿದ್ದಾರೆ. ಅದು ಮುಗಿಯುತ್ತಿದ್ದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts