

ಮುಂಬೈ: 2019ರಿಂದ ಡೇಟ್ ಮಾಡುತ್ತಿದ್ದ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಡಿಸೆಂಬರ್ 9 ರ ಗುರುವಾರದಂದು ರಾಜಸ್ಥಾನದಲ್ಲಿ ಹಿಂದೂ ಪದ್ಧತಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈವರೆಗೂ ತಮ್ಮ ಪ್ರೇಮ ಮತ್ತು ಮದುವೆಯ ಬಗ್ಗೆ ತುಟಿಪಿಟಿಕ್ ಎನ್ನದ ಹಾಟ್ ಕಪಲ್, ತಮ್ಮ ಬಹುಚರ್ಚಿತ ಮದುವೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಈ ಮುನ್ನ 'ಸಾತ್ ಫೇರೆ' ಸಂದರ್ಭದ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದ ಈ ದಂಪತಿ, ಇದೀಗ ತಮ್ಮ ಅರಿಶಿನ ಶಾಸ್ತ್ರದ ಚಿತ್ರಗಳನ್ನು ತಂತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಒಂದೊಂದೇ ಚಿತ್ರಗಳನ್ನು ನೋಡಿ ಅಭಿಮಾನಿಗಳು ಹರ್ಷಭರಿತರಾಗಿದ್ದು, ಇವು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿವೆ. ಕತ್ರೀನಾರ ಚಿತ್ರಗಳಿಗೆ ಅದಾಗಲೇ 28 ಲಕ್ಷಕ್ಕೂ ಹೆಚ್ಚು ಲೈಕ್ಗಳು ಸಿಕ್ಕಿದ್ದು, ವಿಕಿ ಕೌಶಲ್ರ ಚಿತ್ರಗಳಿಗೂ 19 ಲಕ್ಷಕ್ಕೂ ಹೆಚ್ಚು ಲೈಕ್ಗಳು ಸಿಕ್ಕಿವೆ.
ತಮ್ಮ ಈ ಹಲದೀ ಸಮಾರಂಭದ ಚಿತ್ರಗಳಿಗೆ "ಶುಕ್ರ್. ಸಬ್ರ್. ಖುಷಿ." ಎಂಬ ಶೀರ್ಷಿಕೆ ನೀಡಿದ್ದಾರೆ. ಶುಕ್ರ್ ಮತ್ತು ಸಬ್ರ್ ಇಸ್ಲಾಂ ಧರ್ಮದಲ್ಲಿ ದೇವರಲ್ಲಿನ ನಂಬಿಕೆಯ ಪ್ರಮುಖ ಎರಡು ಅಂಶಗಳಾಗಿದ್ದು, ಅರಬಿಕ್ ಭಾಷೆಯಲ್ಲಿ ಶುಕ್ರ್ ಎಂದರೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಅರ್ಪಿಸುವುದಾಗಿಯೂ, ಸಬ್ರ್ ಎಂದರೆ ತಾಳ್ಮೆಯಿಂದ ದಾರಿಯಲ್ಲಿ ಮುಂದುವರೆಯುವುದಾಗಿಯೂ ಅರ್ಥ ಬರುತ್ತದೆ. ಇನ್ನು ಖುಷಿ ಎಂಬ ಹಿಂದಿ ಪದ ಕನ್ನಡದಲ್ಲೂ ಇರುವ ಖುಷಿ ಅಥವಾ ಸಂತಸಕ್ಕೆ ಪರ್ಯಾಯವಾಗಿದೆ.