

ಬೆಂಗಳೂರು: ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಬರಬಹುದು, ಅಷ್ಟೊಂದು ಸಂದರ್ಶನಗಳನ್ನು ಎದುರಿಸಬೇಕಾಗಬಹುದು, ಅಷ್ಟೊಂದು ಪ್ರಶ್ನೆಗಳಿಗೆ ಉತ್ತರಿಸಬೇಕಾಗಬಹುದು ಎಂದು ಯಶ್ ಮತ್ತು ಚಿತ್ರತಂಡದವರು ನಿರೀಕ್ಷಿಸಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ‘ಕೆಜಿಎಫ್ 2’ ಚಿತ್ರದ ಪ್ರಚಾರ ಯಾತ್ರೆಯಲ್ಲಿ ಅವೆಲ್ಲವನ್ನೂ ನೋಡುವಂತಾಗಿದೆ. ಮೊದಲ ಭಾಗದ ಬಿಡುಗಡೆಯ ಸಂದರ್ಭದಲ್ಲಿ ಚಿತ್ರಕ್ಕೆ ಈ ಮಟ್ಟದ ಹೈಪ್ ಇರಲಿಲ್ಲ. ಯಾವಾಗ ಚಿತ್ರ ಯಶಸ್ವಿಯಾಯಿತೋ, ‘ಕೆಜಿಎಫ್’ ಎರಡನೆಯ ಭಾಗಕ್ಕೆ ಕುತೂಹಲ ಮತ್ತು ನಿರೀಕ್ಷೆ ಎರಡೂ ಹೆಚ್ಚಾಗಿದೆ. ‘ಕೆಜಿಎಫ್ 2’ ಯಾವುದೋ ಒಂದು ಭಾಷೆಗೆ ಸೀಮಿತವಾಗದೆ, ಭಾರತೀಯ ಚಿತ್ರ ಎಂದು ಬಿಂಬಿತವಾಗುತ್ತಿದೆ.
ಯಶ್ ಹೋದಲ್ಲಿ ಬಂದಲ್ಲಿ ಒಂದು ಪ್ರಶ್ನೆ ಎದುರಾಗುತ್ತಿದೆ. ಕನ್ನಡ ಚಿತ್ರವೊಂದು ಇಡೀ ದೇಶದಲ್ಲಿ ದೊಡ್ಡ ಮಟ್ಟಿಗೆ ಬಿಡುಗಡೆಯಾಗುತ್ತಿರುವ ಬಗ್ಗೆ, ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಕೇಳಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲೇ ಯಶ್ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಈಗ ಬೇರೆ ಊರುಗಳ ಪತ್ರಿಕಾಗೋಷ್ಠಿಯಲ್ಲೂ ಮಾತನಾಡಿದ್ದಾರೆ. ಒಂದು ಚಿತ್ರವನ್ನು ಒಂದು ಭಾಷೆಗೆ ಮಾತ್ರ ಸೀಮಿತ ಮಾಡದೆ, ಭಾರತೀಯ ಚಿತ್ರ ಎಂದು ನೋಡಬೇಕಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಉತ್ತರ, ದಕ್ಷಿಣ ಎನ್ನುವುದೆಲ್ಲ ದಿಕ್ಕುಗಳಷ್ಟೇ. ಚಿತ್ರರಂಗಗಳನ್ನು ಭಾಷೆ ಮತ್ತು ಪ್ರಾಂತ್ಯಗಳ ಆಧಾರದ ಮೇಲೆ ವಿಂಗಡಿಸುವುದು ಹಳೆಯ ಕಾನ್ಸೆಪ್ಟ್. ಯಾವುದೋ ವುಡ್ ಅಥವಾ ಒಂದು ಭಾಷೆ ಎನ್ನುವುದಕ್ಕಿಂತ ನಾವು ಭಾರತೀಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಚಿತ್ರವನ್ನು ಒಂದು ಭಾಷೆಗೆ ಸೀಮಿತ ಮಾಡದೆ, ಭಾರತೀಯ ಚಿತ್ರ ಎಂದು ನೋಡಬೇಕು’ ಎನ್ನುತ್ತಾರೆ ಯಶ್.
ಈ ಬಗ್ಗೆ ಇನ್ನಷ್ಟು ಮಾತನಾಡುವ ಅವರು, ‘ಜನರಿಗೆ ಮನರಂಜನೆ ಬೇಕು ಮತ್ತು ಆ ಮನರಂಜನೆ ದೇಶದ ಯಾವುದೇ ಭಾಗದಿಂದ ಸಿಕ್ಕರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಇವತ್ತು ಭಾರತೀಯರು ಬೇರೆಬೇರೆ ದೇಶದ ಚಿತ್ರಗಳನ್ನು ನೋಡುತ್ತಿದ್ದಾರೆ. ಈ ವುಡ್ಗಳು ಬರೀ ಚಿತ್ರರಂಗದ ಜನರ ಮನಸ್ಸಿನಲ್ಲಿದೆ. ಮಿಕ್ಕಂತೆ ಜನ ಬಹಳ ಮುಂದೆ ಹೋಗಿದ್ದಾರೆ. ಒಬ್ಬ ವೀಕ್ಷಕನಾಗಿ ನಾನು ಒಂದು ಚಿತ್ರವನ್ನು ಅದು ಹಿಂದಿಯದ್ದೋ, ತೆಲುಗಿನದ್ದೋ ಅಥವಾ ತಮಿಳಿನದ್ದೋ ಎಂದು ನೋಡುವುದಿಲ್ಲ. ನಾವೆಲ್ಲರೂ ಭಾರತೀಯ ಚಿತ್ರರಂಗದವರು ಮತ್ತು ಇನ್ನಾದರೂ ಈ ವುಡ್ಗಳನ್ನು ಬಿಟ್ಟು, ಭಾರತೀಯ ಚಿತ್ರರಂಗ ಎಂದು ಕರೆಯಬೇಕು. ಚಿತ್ರಗಳನ್ನು ಸಂಭ್ರಮಿಸಬೇಕು’ ಎಂದು ಹೇಳಿದ್ದಾರೆ. ಅಂದಹಾಗೆ, ‘ಕೆಜಿಎಫ್ 2’ ಚಿತ್ರವು ಏ. 14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.