

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಚಿತ್ರವು ಪ್ರಾರಂಭವಾಗಿ ಇಂದಿಗೆ (ಡಿಸೆಂಬರ್ 12) ಎರಡು ವರ್ಷಗಳಾಗಿವೆ. ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಇದೇ ದಿನ ಚಿತ್ರದ ಮುಹೂರ್ತವಾಗಿತ್ತು. ಆಗ ಶುರುವಾದ ಚಿತ್ರ, ಈಗ ಮುಕ್ತಾಯದ ಹಂತಕ್ಕೆ ಬಂದಿದೆ.
ಇದನ್ನೂ ಓದಿ: ‘ಮಾರಿ ಗೋಲ್ಡ್’ ಚಿತ್ರದ ಚಿತ್ರೀಕರಣ ಮುಗೀತು …
ಚಿತ್ರ ಎರಡು ವರ್ಷಗಳ ಹಿಂದೆ ಇದೇ ದಿನ ಪ್ರಾರಂಭವಾಗಿತ್ತು ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ನೆನಪಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಇದೊಂದು ಅದ್ಭುತ ಜರ್ನಿ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು, ಇಡೀ ಕುಟುಂಬಕ್ಕೆ ರಸದೌತಣವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಏಪ್ರಿಲ್ 24ರ ಹೊತ್ತಿಗೆ ಡಾ. ರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ 'ಯುವರತ್ನ' ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಚಿತ್ರದ ಬಿಡುಗಡೆ ಅನಿರ್ಧಿಷ್ಟವಾಗಿ ಮುಂದಕ್ಕೆ ಹೋಯಿತು.
ಕಳೆದ ತಿಂಗಳು ಚಿತ್ರದ ಹಾಡುಗಳ ಚಿತ್ರೀಕರಣ ಸಂಪೂರ್ಣವಾಗಿದ್ದು, ಇದೀಗ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ, 'ಒಂದೂರಲ್ಲೊಬ್ಬ ರಾಜ ಇದ್ದ ...' ಎಂಬ ಹಾಡಿಗೆ ಪುನೀತ್ ಧ್ವನಿಯಾಗಿದ್ದಾರೆ. ಮಿಕ್ಕಂತೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದ ಮೊದಲ ಪ್ರಿಂಟ್ ಹೊರಬರಲಿದೆ. ಇನ್ನು ಚಿತ್ರವನ್ನು ಸೆನ್ಸಾರ್ ಮಾಡಿಸಿ, ಮುಂದಿನ ಯುಗಾದಿ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ಧನಂಜಯ್, ಸಯೇಷಾ ಸೆಹ್ಗಲ್, ದಿಗಂತ್, ಸೋನು ಗೌಡ ಮುಂತಾದವರು ಅಭಿನಯಿಸಿದ್ದು, ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ ಸಂತೋಷ್ ಆನಂದರಾಮ್. ಇನ್ನು ವಿಜಯ್ಕುಮಾರ್ ಕಿರಗಂದೂರು ಈ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್ನಡಿ ನಿರ್ಮಾಣ ಮಾಡಿದ್ದಾರೆ.