

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ-ನಿರ್ದೇಶಕ-ನಿರ್ಮಾಪಕ ಬಿ.ಆರ್. ಪಂತುಲು. ಕನ್ನಡದ ಮೊದಲ ಸಾಮಾಜಿಕ ಚಿತ್ರವಾದ 'ಸಂಸಾರ ನೌಕೆ'ಯ ಹೀರೋ ಆಗಿದ್ದ ಪಂತುಲು ಅವರು, ನಂತರದ ವರ್ಷಗಳಲ್ಲಿ ಹಲವು ಚಿತ್ರಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸುವುದರ ಜತೆಗೆ, ಹಲವು ಚಿತ್ರಗಳನ್ನೂ ನಿರ್ದೇಶನ ಮಾಡಿದವರು.
ಇಂದು ಪಂತುಲು ಅವರ ಹುಟ್ಟುಹಬ್ಬ. 1910ರ ಜುಲೈ 26ರಂದು ಜನಿಸಿದ ಅವರು, ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 'ಮೊದಲ ತೇದಿ', 'ರತ್ನಗಿರಿ ರಹಸ್ಯ', 'ಗಾಳಿ ಗೋಪುರ', 'ಸ್ಕೂಲ್ ಮಾಸ್ಟರ್', 'ಮಕ್ಕಳ ರಾಜ್ಯ', 'ಕಿತ್ತೂರು ಚೆನ್ನಮ್ಮ', 'ಶ್ರೀಕೃಷ್ಣದೇವರಾಯ', 'ಸಾಕು ಮಗಳು', 'ಚಿನ್ನದ ಗೊಂಬೆ', 'ಎಮ್ಮೆ ತಮ್ಮಣ್ಣ', ಮುಂತಾದ ಹಲವು ಚಿತ್ರಗಳನ್ನು ಕನ್ನಡದಲ್ಲಿ ನಿರ್ದೇಶಿಸಿದ ಅವರು, ತೆಲಗು-ತಮಿಳು-ಹಿಂದಿಯಲ್ಲೂ ಚಿತ್ರಗಳನ್ನು ಮಾಡಿದ್ದಾರೆ. 'ದಿಲ್ ತೇರಾ ದೀವಾನಾ', 'ವೀರಪಾಂಡ್ಯ ಕಾಟ್ಟಬೊಮ್ಮನ್', 'ರಗಸಿಯ ಪೊಲೀಸ್ 115', 'ಕರ್ಣನ್' ಮುಂತಾದ ಸಿನಿಮಾಗಳನ್ನು ಅವರು ಬೇರೆ ಭಾಷೆಗಳಲ್ಲೂ ನಿರ್ಮಿಸಿ-ನಿರ್ದೇಶಿಸಿದ್ದಾರೆ.
ಈ ಎಲ್ಲಾ ಚಿತ್ರಗಳ ಪೈಕಿ ಅವರ ಸರ್ವಶ್ರೇಷ್ಠ ಚಿತ್ರ ಎಂದು ಪರಿಗಣಿತವಾಗಿರುವುದು 'ಸ್ಕೂಲ್ ಮಾಸ್ಟರ್'. 1958ರಂದು ಬಿಡುಗಡೆಯಾದ ಚಿತ್ರ, ಅದೆಷ್ಟು ಬಾರಿ ಬೇರೆ ಭಾಷೆಗಳಿಗೆ ಡಬ್ ಆಗಿದೆಯೋ, ಅದೆಷ್ಟು ಭಾಷೆಗಳಿಗೆ ರೀಮೇಕ್ ಆಗಿದೆಯೋ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದೆಷ್ಟು ಭಾಷೆಗಳ ಚಿತ್ರಗಳಿಗೆ ಸ್ಫೂರ್ತಿಯಾಗಿದೆಯೋ ಎಂದು ಲೆಕ್ಕ ಹಾಕುವುದು ಕಷ್ಟ. ಹಾಗೆ ನೋಡಿದರೆ, 'ಸ್ಕೂಲ್ ಮಾಸ್ಟರ್' ಸಹ ವಿದೇಶಿ ಚಿತ್ರವೊಂದರಿಂದ ಸ್ಫೂರ್ತಿ ಪಡೆದಂತಹ ಚಿತ್ರವೇ. ಆದರೆ, ಈ ಚಿತ್ರ ಭಾರತದ ಹಲವು ಭಾಷೆಗಳಲ್ಲಿ ಮತ್ತಮತ್ತೆ ಬಿಡುಗಡೆಯಾಗಿದೆ. ಅದಕ್ಕೆ ಕಾರಣ, ಬಿ.ಆರ್. ಪಂತುಲು ಅವರು ಈ ಚಿತ್ರವನ್ನು ಕಟ್ಟಿಕೊಟ್ಟ ರೀತಿ.
ಬಿ.ಆರ್. ಪಂತುಲು ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ 'ಸ್ಕೂಲ್ ಮಾಸ್ಟರ್' ಅದೆಷ್ಟು ಯಶಸ್ವಿ ಮತ್ತು ಅದೆಷ್ಟು ಜನಪ್ರಿಯವಾಯಿತೆಂದರೆ, ಮೊದಲು ತೆಲುಗು ಮತ್ತು ತಮಿಳಿಗೆ ಆ ಚಿತ್ರ ಡಬ್ ಆಯಿತು. ಆ ನಂತರ ಅವರೇ, ಆ ಚಿತ್ರವನ್ನು ಹಿಂದಿಯಲ್ಲಿ 'ಸ್ಕೂಲ್ ಮಾಸ್ಟರ್' ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದರು. ಪಂತುಲು ಅವರ ಶಿಷ್ಯರಾಗಿ ಗುರುತಿಸಿಕೊಂಡಿದ್ದ ಪುಟ್ಟಣ್ಣ ಕಣಗಾಲ್ ಅವರು, ಆ ಚಿತ್ರವನ್ನು ಮಲಯಾಳಂಗೆ ಅಧಿಕೃತವಾಗಿ ರೀಮೇಕು ಮಾಡಿದರು. ಅಲ್ಲಿಗೆ ಐದು ಭಾಷೆಗಳಲ್ಲಿ ಒಂದೇ ಚಿತ್ರ ಬಂದ ಹಾಗಾಯಿತು.
ಅದಾಗಿ ಕೆಲವು ವರ್ಷಗಳ ನಂತರ, ತೆಲುಗಿನಲ್ಲಿ 'ಬಡೀ ಪಂತುಲು' ಎಂಬ ಚಿತ್ರ ಬಿಡಗುಡೆಯಾಯಿತು. ಎನ್.ಟಿ. ರಾಮರಾವ್ ಅಭಿನಯದ ಈ ಚಿತ್ರ ಸಹ 'ಸ್ಕೂಲ್ ಮಾಸ್ಟರ್'ನ ರೀಮೇಕ್ ಆಗಿತ್ತು. ಇದರ ಜನಪ್ರಿಯತೆ ನೋಡಿ ಪಂತುಲು ಅವರೇ ತಮಿಳಿನಲ್ಲಿ ಇನ್ನೊಮ್ಮೆ 'ಸ್ಕೂಲ್ ಮಾಸ್ಟರ್' ಹೆಸರಿನಲ್ಲಿ ರೀಮೇಕ್ ಮಾಡಿದರು. ಅಲ್ಲಿಗೆ ಕನ್ನಡ ಚಿತ್ರವೊಂದು ತೆಲುಗು ಮತ್ತು ತಮಿಳಿನಲ್ಲಿ ಒಮ್ಮ ಡಬ್ ಆಗಿ, ಇನ್ನೊಮ್ಮೆ ರೀಮೇಕ್ ಆಗಿ ಬಿಡುಗಡೆಯಾಗಿರುವುದು ವಿಶೇಷ.
ಇದರ ಮಧ್ಯೆ, ಅದೇ ಕಥೆಯನ್ನಿಟ್ಟುಕೊಂಡು ಅದೆಷ್ಟು ಚಿತ್ರಗಳು ನಿರ್ಮಾಣವಾಗಿವೆಯೋ ಹೇಳುವುದು ಕಷ್ಟ. ಅಂಥದ್ದೊಂದು ಚಿತ್ರ ಹಿಂದಿಯ 'ಬಾಗ್ಬಾನ್'. ಇದು ಸಹ 'ಸ್ಕೂಲ್ ಮಾಸ್ಟರ್'ನಿಂದ ಸ್ಫೂರ್ತಿಪಡೆದ ಚಿತ್ರವೇ. ಒಂದೇ ವ್ಯತ್ಯಾಸವೆಂದರೆ, ಇಲ್ಲಿ ನಾಯಕ ಸ್ಕೂಲ್ ಮಾಸ್ಟರ್ ಆಗಿರುವುದಿಲ್ಲ. ಮಿಕ್ಕಂತೆ ಬಹುತೇಕ ಅದೇ ಕಥೆ ಇದ್ದ ಈ ಚಿತ್ರ, ಆ ನಂತರ ಮತ್ತೆ ಕನ್ನಡದಕ್ಕೆ 'ಈ ಬಂಧನ' ಹೆಸರಲ್ಲಿ ರೀಮೇಕ್ ಆಯಿತು. ವಿಷ್ಣುವರ್ಧನ್ ಮತ್ತು ದರ್ಶನ್ ಅಭಿನಯದ ಈ ಚಿತ್ರ ಸಹ ಯಶಸ್ವಿ ಪ್ರದರ್ಶನ ಕಂಡಿತು.
PHOTOS: ಹುಟ್ಟುಹಬ್ಬದ ಖುಷಿಯಲ್ಲಿ ‘ಲವ್ ಮಾಕ್ಟೇಲ್’ ಬೆಡಗಿ ಅಮೃತಾ…