ರಂಜಾನ್ ತಿಂಗಳಲ್ಲಿ ಸೌದಿ ಸಚಿವರ ಜತೆ ಬಾಲಿವುಡ್​ ಬಾದ್‌ಶಾಗಳ ಔತಣಕೂಟ! ಕಾರಣ?

Published on
ಮುಂಬೈ: ಇದು ರಂಜಾನ್ ತಿಂಗಳು. ಮುಸ್ಲಿಂಮರಿಗೆ ತುಂಬಾ ಪವಿತ್ರವಾದ ತಿಂಗಳು. ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಈ ತಿಂಗಳನ್ನು ಮುಸ್ಲಿಂಮರು ಅದ್ಧೂರಿಯಾಗಿ ಆಚರಿಸುತ್ತಾರೆ. ಅವರ ಸ್ನೇಹಿತರ ಹಾಗೂ ಬಂಧುಗಳ ಮನೆಗೆಳಿಗೆ ತೆರಳಿ ಹಲವು ಔತಣಕೂಟಗಳಲ್ಲಿ ಭಾಗಿಯಾಗುತ್ತಾರೆ. ಹಾಗೆಯೇ, ಸದ್ಯ ಬಾಲಿವುಡ್​ನ ಮೂವ್ವರು ಖಾನ್ ದಿಗ್ಗಜರು ಒಂದು ಕಡೆ ಸೇರಿದ್ದಾರೆ. ಹೌದು, ನಟ ಶಾರುಖ್ ಅವರು ಮುಂಬೈನ ನಿವಾಸ ಮನ್ನತ್​ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ನಟ ಶಾರುಖ್ ಖಾನ್ ಅವರ ಈ ಪಾರ್ಟಿಯಲ್ಲಿ ನಟ ಸಲ್ಮಾನ್ ಖಾನ್, ನಟ ಸೈಫ್ ಅಲಿ ಖಾನ್ ಕೂಡಾ ಭಾಗಿಯಾಗಿದ್ದಾರೆ. ಇನ್ನು, ಇಲ್ಲಿ ಗಮನಿಸುವ ವಿಷವೆಂದರೆ ಅದು ನಟ ಅಕ್ಷಯ್ ಕುಮಾರ್ ಅವರು ಕೂಡಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದು.
ಹೀಗಿದ್ದರೂ, ಸದ್ಯ ಈ ಪಾರ್ಟಿಯಲ್ಲಿ ಸೌದಿ ಸಚಿವ ಹಾಗೂ ರೆಡ್ ಸೀ ಫಿಲ್ಮ್ ಫೆಸ್ಟಿವಲ್ ಅಧ್ಯಕ್ಷ ಆಗಿರುವ ಮೊಹಮ್ಮದ್ ಅಲ್ ಟರ್ಕಿ ಅವರು ಭಾಗಿಯಾಗಿದ್ದು ಮಾತ್ರ ಎಲ್ಲರ ಗಮನವನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಇನ್ನು, ಈ ನಾಲ್ಕು ನಟರ ಜತೆಗೆ ಸೌದಿ ಸಚಿವ ಮೊಹಮ್ಮದ್ ಅಲ್ ಟರ್ಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಸೌದಿ ಸಚಿವ ಭಾಗಿಯಾಗಿದ್ದರು ಎಂದ ತಕ್ಷಣ 'ಯಾವ ಉದ್ದೇಶಕ್ಕೆ ಈ ಸಮ್ಮಿಲನ ಆಗಿದೆ?' ಎಂಬ ಪ್ರಶ್ನೆ ನಟರ ಅಭಿಮಾನಿಗಳನ್ನು ಹಾಗೂ ದೇಶದ ಜನತೆಯನ್ನು ಕಾಡುತ್ತಿದೆ. ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಟರ್ಕಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಪೋಸ್ಟ್​ಗೆ ''ಭಾರತದಲ್ಲಿರುವ ನನ್ನ ಸಹೋದರ ಶಾರುಖ್ ಅವರಿಂದ ರಂಜಾನ್ ಹಬ್ಬದ ಶುಭಾಶಯಗಳು ಸಿಕ್ಕಿವೆ'', ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. 
ಇನ್ನು, ಸೌದಿ ಅರೇಬಿಯಾದ ಸಾಂಸ್ಕೃತಿಕ ಸಚಿವ ಬೇದರ್ ಬಿನ್ ಫರ್ಹಾನ್​ ಅಲ್​ಸೌದ್​ ಜೊತೆ ಕೂಡಾ ಬಾಲಿವುಡ್ ನಟರು ಕಾಲ ಕಳೆದಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಫರ್ಹಾನ್ ಅಲ್ ಸೌದ್ ಅವರು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇವರ ಫೋಟೋಗಳು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಸೌದಿ ಅರೇಬಿಯಾದ ಸಾಂಸ್ಕೃತಿಕ ಸಚಿವ ಬೇದರ್ ಬಿನ್ ಫರ್ಹಾನ್​ ಅಲ್​ಸೌದ್ ಅವರು ''ಬಾಲಿವುಡ್ ಸೂಪರ್ ಸ್ಟಾರ್​ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಜೊತೆ ಸಿನಿಮಾ ಜಗತ್ತಿನ ಸುಂದರ ವಿಷಯಗಳ ಬಗ್ಗೆ ಸಂವಾದ ಮಾಡಿದ್ದಕ್ಕೆ ಖುಷಿ ಆಯಿತು'', ಎಂದಿದ್ದಾರೆ. 
ಈ ಮೂಲಕ ಇದೊಂದು ಸಹಜವಾದ ಭೇಟಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ, ಕೆಲವರು ಮಾತ್ರ ಸೌದಿ ಅರೇಬಿಯಾದ ಸಾಂಸ್ಕೃತಿಕ ಸಚಿವ ಬೇದರ್ ಬಿನ್ ಫರ್ಹಾನ್​ ಅಲ್​ಸೌದ್ ಔತಣಕೂಟದಲ್ಲಿ ಭಾಗವಹಿಸಿದ್ದರಿಂದ ಇದು ಬಹುಶಃ ಮುಂದೆ 2022 ರಲ್ಲಿ ಡಿಸೆಂಬರ್ 1 ರಿಂದ 10 ರವರೆಗೆ ನಡೆಯಲಿರುವ ರೆಡ್ ಸೀ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕುರಿತು ಆಗಿರಬಹುದು ಎಂದು ಊಹಿಸುತ್ತಿದ್ದಾರೆ. ರೆಡ್ ಸೀ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಳೆದ ಬಾರಿ 67 ದೇಶಗಳಲ್ಲಿನ 34 ಭಾಷೆಗಳ 138 ಸಿನಿಮಾಗಳನ್ನು ಪ್ರದರ್ಶನ ಮಾಡಲಾಗಿತ್ತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net