ಸರಿಗಮಪ ಸೀಸನ್​ 17ರ ಸ್ಪರ್ಧಿಯಿಂದ ಕರೊನಾ ಜಾಗೃತಿ ಗೀತೆ; ಇವರು ಬರೀ ಗಾಯಕರಷ್ಟೇ ಅಲ್ಲ ಪೊಲೀಸ್​ ಇಲಾಖೆಯ ಕರೊನಾ ವಾರಿಯರ್​

subramani
Published on

ಬೆಂಗಳೂರು: ದಿನೇದಿನೆ ಕರೊನಾ ಹಾವಳಿ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರೂ, ಕಾಟಾಚಾರಕ್ಕೆ ಪಾಲಿಸುವ ಕೆಲಸ ನಡೆಯುತ್ತಿದೆ. ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ನಿಂತರೂ ಜನ ಬಗ್ಗುತ್ತಿಲ್ಲ. ಹೀಗಿರುವಾಗಲೇ ಅದೇ ಪೊಲೀಸರೀಗ ಲಾಠಿ ಬದಲಿಗೆ ಮೈಕ್​ ಹಿಡಿದಿದ್ದಾರೆ. ಹಾಗಂತ ಎಲ್ಲರನ್ನು ಚದುರಿಸಲು, ಅನೌನ್ಸ್​ ಮಾಡಲು ಅಲ್ಲ. ಬದಲಿಗೆ ಹಾಡಿನ ಮೂಲಕ ಜನರನ್ನು ಎಚ್ಚರಗೊಳಿಸಲು ಸಿದ್ಧರಾಗಿದ್ದಾರೆ.
ಸರಿಗಮಪ ಸೀಸನ್​ 17ರ ಸ್ಫರ್ಧಿ ಪೊಲೀಸ್​ ಪೇದೆ ಸುಬ್ರಮಣಿ ಈಗಾಗಲೇ ನಾಡಿನ ಜನತೆಗೆ ಪರಿಚಿತ ಮುಖ. ಅವರ ಹಾಡಿಗೆ ಜಡ್ಜ್​ಗಳ ಜತೆಗೆ ಕರುನಾಡ ಪ್ರೇಕ್ಷಕರೂ ಫಿದಾ ಆಗಿದ್ದಾರೆ. ಇದೀಗ ಇದೇ ಸುಬ್ರಮಣಿ ಜಾಗೃತಿ ಹಾಡಿನ ಮೂಲಕ ಆಗಮಿಸಿದ್ದಾರೆ. "ಕೈ ಮುಗಿದು ನಿಮ್ಮ ಬೇಡಿಕೊಳ್ಳುತಿವಿ. ಹೊರಗಡೆ ಬರಬೇಡಿ.. ಇರೋದೊಂದು ಜೀವ ಕಳಕೊಂಡ ಮ್ಯಾಲೆ, ಮತ್ತೆ ಸಿಗುವುದೇನು, ತಮ್ಮ ಮರಳಿ ಬರುವುದೇನೋ..' ಸಾಹಿತ್ಯವುಳ್ಳ ಹಾಡಿಗೆ ಸುಬ್ರಮಣಿ ಧ್ವನಿ ನೀಡಿದ್ದಾರೆ. ಅವರೊಂದಿಗೆ ಟ್ರಾಫಿಕ್​ ಪೊಲೀಸ್​ ಪೇದೆ ನೇತ್ರಾವತಿ ಸಹ ಸಾಥ್​ ನೀಡಿದ್ದಾರೆ. ಹಾಡಿಗೆ ಸುಬ್ರಮಣಿ ಮತ್ತು ಶ್ರೀರಂಗ ದರ್ಶನ್​ ಸಾಹಿತ್ಯ ಬರೆದಿದ್ದು, ಬಿ.ಆರ್​ ಹೇಮಂತ್​ ಕುಮಾರ್​ ರೆಕಾರ್ಡಿಂಗ್​ ಮತ್ತು ಸಂಕಲನ ಕೆಲಸ ಮಾಡಿದ್ದಾರೆ. ಸದ್ಯ ಈ ಹಾಡೀಗ ಡಿಜಿಪಿ ಕರ್ನಾಟಕ ಟ್ವಿಟರ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.
2 ನಿಮಿಷ 18 ಸೆಕೆಂಡ್​ನ ಈ ಹಾಡಿನಲ್ಲಿ ಮನೆಯಲ್ಲಿರುವಂತೆ ಮನವಿ ಮಾಡಲಾಗಿದೆ. ಜತೆಗೆ ಕರೊನಾದ ಪರಿಸ್ಥಿತಿ ಯಾವ ಹಂತದಲ್ಲಿದೆ ಎಂಬುದನ್ನು ಚಿತ್ರಗಳ ಮೂಲಕ ತೋರಿಸಲಾಗಿದೆ. ಅಂದಹಾಗೆ, ಈ ಹಿಂದೆ ಸಿನಿಮಾರಂಗದಿಂದ ಅನೂಪ್​ ಸೀಳಿನ್​, ವಿ ನಾಗೇಂದ್ರ ಪ್ರಸಾದ್​, ಪವನ್​ ಒಡೆಯರ್​, ಎಸ್​ಪಿ ಬಾಲಸುಬ್ರಮಣ್ಯ ಸೇರಿ ಹಲವರು ಕರೊನಾ ಕುರಿತು ಹಾಡುಗಳಿಗೆ ಧ್ವನಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net