

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಸಾರಾ ಅಲಿ ಖಾನ್ ಜತೆಗೆ ಸಂಬಂಧವಿತ್ತು, ಇಬ್ಬರೂ ತುಂಬಾ ಪ್ರೀತಿಸುತ್ತಿದ್ದರು, ಒಂದು ದಿನ ಸುಶಾಂತ್ ಅವರನ್ನು ಸಾರಾ ಬಿಟ್ಟು ಹೋದರು ... ಇಂಥದ್ದೊಂದು ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ.
ಅಷ್ಟೇ ಅಲ್ಲ, ಸುಶಾಂತ್ ಅವರು ಡಿಪ್ರೆಶನ್ಗೆ ಜಾರುವುದಕ್ಕೂ, ರಿಯಾ ಚಕ್ರವರ್ತಿಗೆ ಹತ್ತಿರವಾಗುವುದಕ್ಕೂ ಸಾರಾ ಅಗಲಿಕೆಯೇ ಕಾರಣ ಎಂದು ಹೇಳಲಾಗುತ್ತದೆ. ಇಷ್ಟಕ್ಕೂ ಸುಶಾಂತ್ ಅವರನ್ನು ಸಾರಾ ಬಿಟ್ಟು ಹೋಗಿದ್ದೇಕೆ? ಈ ಪ್ರಶ್ನೆಗೆ ಮಾತ್ರ ಇದುವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಆ ಉತ್ತರವನ್ನು ಸಾರಾ ಅಲಿ ಖಾನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳ ಎದುರು ಹೇಳಿದ್ದಾರಂತೆ.
ಡ್ರಗ್ಸ್ ವಿಷಯವಾಗಿ ಎನ್ಸಿಬಿ ಅಧಿಕಾರಿಗಳು, ಸಾರಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೊಟ್ಟಿದ್ದರು. ಅದರಂತೆ, ಸೆಪ್ಟೆಂಬರ್ 26ರಂದು ಸಾರಾ, ಎನ್ಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸಾರಾ, ತಾನೇಕೆ ಸುಶಾಂತ್ ಅವರಿಂದ ದೂರಾದೆ ಎಂಬುದನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಅದರ ಪ್ರಕಾರ, ಸುಶಾಂತ್ಗೆ ಯಾವುದೇ ಸಂಬಂಧದ ಬಗ್ಗೆಯೂ ನಿಷ್ಠೆ ಇರಲಿಲ್ಲವಂತೆ. ಅದೇ ಕಾರಣಕ್ಕೆ 2019ರಲ್ಲಿ ದೂರವಾಗಿದ್ದಾಗಿ ಸಾರಾ ಹೇಳಿಕೊಂಡಿದ್ದಾರಂತೆ. ಅದರ ಜತೆಗೆ, ಸುಶಾಂತ್ ಜತೆಗೆ ನಡೆಸಿದ ಚಾಟ್ಗಳನ್ನು ಸಹ ಅವರು ಅಧಿಕಾರಿಗಳಿಗೆ ತೋರಿಸಿದ್ದಾರಂತೆ.
ಸುಶಾಂತ್ಗೆ ಸಾರಾ ಅಲ್ಲದೆ ಇನ್ನೂ ಕೆಲವು ಹುಡುಗಿಯರ ಜತೆಗೆ ಸಂಬಂಧ ಇತ್ತು ಎಂದು ಹೇಳಲಾಗಿದೆ. ಸಾರಾಗಿಂತ ಮುನ್ನ ಅಂಕಿತಾ ಲೋಖಂಡೆ, ಕೃತಿ ಸಾನನ್ ಜತೆಗೆ ಹತ್ತಿರದ ಒಡನಾಟವಿದ್ದ ಸುಶಾಂತ್, ಆ ನಂತರ ಸಾರಾ ಅಲಿ ಖಾನ್ಗೆ ಹತ್ತಿರವಾದರು ಎಂದು ಹೇಳಲಾಗುತ್ತದೆ. ಸಾರಾ ಜತೆಗೆ ಬ್ರೇಕ್ಅಪ್ ಆದ ನಂತರ ರಿಯಾ ಅವರ ಜತೆಗೆ ಲಿವ್ ಇನ್ ಸಂಬಂಧದಲ್ಲಿದ್ದ ಸುಶಾಂತ್, ನಿಧನರಾಗುವುದಕ್ಕಿಂತ ಮುಂಚೆ, ರಿಯಾ ಜತೆಗೂ ಬ್ರೇಕ್ಅಪ್ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.