ಸಾರಾ ಅಲಿಖಾನ್​ಗೆ ಬೇಡ್ವಂತೆ ರಿಮೇಕ್ ಸಹವಾಸ

Sara
Published on

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಈಗಷ್ಟೇ ಸಿನಿಮಾರಂಗದಲ್ಲಿ ಒಳ್ಳೊಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈವರೆಗೂ ನಟಿಸಿದ ಬೆರಳೆಣಿಕೆ ಸಿನಿಮಾಗಳಲ್ಲಿ ಗೆಲುವಿಗಿಂತ ಸೋಲಿನ ರುಚಿಯನ್ನೇ ಹೆಚ್ಚು ಸವಿದಿರುವ ಸಾರಾ, ಮುಂದಿನ ಭವಿಷ್ಯ ಗಮನದಲ್ಲಿಟ್ಟುಕೊಂಡು ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಅದೇನೆಂದರೆ, ಇನ್ನೆಂದೂ ಅವರು ರಿಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲವಂತೆ. ಈ ನಿರ್ಧಾರಕ್ಕೆ ಕಾರಣ, ಇತ್ತೀಚೆಗೆ ಬಿಡುಗಡೆಯಾದ ‘ಅತರಂಗಿ ರೇ’.

2018ರ ‘ಕೇದಾರ್​ನಾಥ್’ ಚಿತ್ರ ಪ್ಲಾಪ್ ಪಟ್ಟಿಗೆ ಸೇರಿದರೂ, ಅದೇ ವರ್ಷ ಬಂದ ತೆಲುಗಿನ ‘ಟೆಂಪರ್’ ಚಿತ್ರದ ಹಿಂದಿ ರಿಮೇಕ್ ‘ಸಿಂಬಾ’ ಆ ಸೋಲನ್ನು ಮರೆಮಾಚಿತ್ತು. ಅದಾದ ಮೇಲೆ ‘ಲವ್ ಆಜ್​ಕಲ್’, ‘ಕೂಲಿ ನಂ.1’ ಹೆಚ್ಚು ಸದ್ದು ಮಾಡಲಿಲ್ಲ. ಈ ನಡುವೆ ಒಟಿಟಿಯಲ್ಲಿ ಬಂದ ‘ಅತರಂಗಿ ರೇ’ ಚಿತ್ರವು ಸಾರಾಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅಕ್ಷಯ್ ಕುಮಾರ್ ಮತ್ತು ಧನುಷ್​ರಂತಹ ಪ್ರತಿಭಾವಂತ ಕಲಾವಿದರ ನಡುವೆಯೂ ಗುರುತಿಸಿಕೊಳ್ಳುವಂತೆ ಮಾಡಿತು. ಇದೆಲ್ಲವನ್ನು ಗಮನಿಸಿ ಇನ್ನು ಮುಂದೆ ರೀಮೇಕ್ ಬೇಡ, ಸ್ವಮೇಕ್ ಇರಲಿ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರಂತೆ.

ಅಷ್ಟೇ ಅಲ್ಲ, ಸ್ವಮೇಕ್ ಚಿತ್ರಗಳಲ್ಲೂ ಗಟ್ಟಿಯಾದ ಪಾತ್ರಗಳನ್ನೇ ಅವರು ಹುಡುಕುತ್ತಿದ್ದಾರಂತೆ. ಲಕ್ಷ್ಮಣ ಉತ್ಕೇಕರ್ ನಿರ್ದೇಶನದ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ಸಾರಾ ನಟಿಸುತ್ತಿದ್ದು, ಆ ಚಿತ್ರಗಳ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net