

ಮುಂಬೈ: ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮಗಳು ಸಾರಾ ಅಲಿ ಖಾನ್ ಒಂದು ತಪ್ಪು ಮಾಡಿದ್ದಾರಂತೆ. ಆ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರಂತೆ. ಇಷ್ಟಕ್ಕೂ ಅವರು ಮಾಡಿರುವ ತಪ್ಪು ಏನು? ಅವರೇ ಈ ವಿಷಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಾರಾ, ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು 'ಕೇದಾರ್ನಾಥ್' ಚಿತ್ರದ ಮೂಲಕ. ಆ ಚಿತ್ರ ಹಿಟ್ ಆಯಿತು. 'ಸಿಂಬ' ಸಹ ಸಾರಾಗೆ ಹೆಸರು ತಂದುಕೊಟ್ಟಿತು. ಆದರೆ, ಆ ನಂತರ ಬಿಡುಗಡೆಯಾದ 'ಲವ್ ಆಜ್ ಕಲ್', 'ಕೂಲಿ ನಂಬರ್ ಒನ್' ಮತ್ತು 'ಅತರಂಗಿ ರೇ' ಚಿತ್ರಗಳು ಹೆಚ್ಚು ಸದ್ದು ಮಾಡಲಿಲ್ಲ. ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಸೋತಿದ್ದರ ಬಗ್ಗೆ ಸಾರಾ ಮನಬಿಚ್ಚಿ ಮಾತನಾಡಿದ್ದಾರೆ. ಅದು ತಮ್ಮದೇ ತಪ್ಪು ಎಂದು ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಸಾರಾ, 'ಕಲಾವಿದರಾಗಿ ನಾವು ಪ್ರತಿ ದಿನ ಸಾಕಷ್ಟು ವಿಷಯಗಳನ್ನು ಕಲಿಯುತ್ತಿರುತ್ತೇವೆ. ಅದೇ ರೀತಿ ತಪ್ಪುಗಳನ್ನು ಸಹ ಮಾಡುತ್ತಿರುತ್ತೇವೆ. ಜನರಿಗೆ ಇಷ್ಟವಾಗದಂತಹ ಕೆಲವು ಸಿನಿಮಾಗಳನ್ನು ನಾನು ಮಾಡಿದ್ದೇನೆ. ಈ ತಪ್ಪುಗಳನ್ನು ನಾನು ಬೇಕಂತಲೇ ಮಾಡಿಲ್ಲ. ತನ್ನಷ್ಟಕ್ಕೆ ತಾನೇ ಆಗಿವೆ. ಈ ವಯಸ್ಸಿನಲ್ಲಿ ಈ ತರಹದ ತಪ್ಪುಗಳನ್ನು ಮಾಡುವುದು ಸಹಜ. ಈ ತರಹದ ತಪ್ಪುಗಳನ್ನು ಮಾಡುವುದು ಚಿತ್ರಜೀವನದ ಒಂದು ಭಾಗ' ಎಂದು ಸಾರಾ ಹೇಳಿಕೊಂಡಿದ್ದಾರೆ.
ಒಂದು ವರ್ಷದ ಹಿಂದೆ ಓಟಿಟಿಯಲ್ಲಿ ಬಿಡುಗಡೆಯಾದ 'ಅತರಂಗಿ ರೇ' ಚಿತ್ರ ಬಿಟ್ಟರೆ, ಸಾರಾ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. 'ಗ್ಯಾಸ್ಲೈಟ್', 'ಏ ವತನ್ ಮೇರೆ ವತನ್', 'ಮೆಟ್ರೋ ಇನ್ ದಿನೋ' ಮತ್ತು 'ಮರ್ಡರ್ ಮುಬಾರಕ್' ಚಿತ್ರದಲ್ಲಿ ಸಾರಾ ಅಲಿ ಖಾನ್ ಅಭಿನಯಿಸುತ್ತಿದ್ದು, ಈ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ.