ಏನಿದು ‘ಯುವರತ್ನ’ ಬಗ್ಗೆ ಸುಳ್ಳು ಸುದ್ದಿ? ... ಏಪ್ರಿಲ್ ಫೂಲ್ ಮಾಡಿದವರಿಗೆ ಉತ್ತರ ಕೊಟ್ಟ ಸಂತೋಷ್ ಆನಂದರಾಮ್

Yuvaratna Final
Published on

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದಿರಬೇಕಿತ್ತು. ಎರಡು ಹಾಡುಗಳ ಚಿತ್ರೀಕರಣಕ್ಕೆಂದು ಯೂರೋಪ್‌ಗೆ ಹೋಗಬೇಕೆಂದು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದರೂ, ಕರೊನಾ ಕಾಟದಿಂದ ಅದು ಸಾಧ್ಯವಾಗಲಿಲ್ಲ. ಈಗಂತೂ ದೇಶಾದ್ಯಂತ ಲಾಕ್‌ಡೌನ್ ಇದೆ. ಏಪ್ರಿಲ್ 14ರ ನಂತರ ಲಾಕ್‌ಡೌನ್ ಏನಾದರೂ ಮುಗಿದರೆ, ಆ ನಂತರ ಚಿತ್ರತಂಡ ವಿದೇಶಕ್ಕೆ ಹೋಗಿ ಚಿತ್ರೀಕರಣ ಮುಗಿಸಿಕೊಂಡು ಬಂದು, ಆ ನಂತರ ಚಿತ್ರ ಬಿಡುಗಡೆ ಮಾಡಲಿದೆ.

ಈ ಮಧ್ಯೆ ಚಿತ್ರದ ಬಗ್ಗೆ ಸುಳ್ಳು ಸುದ್ದಿಯೊಂದು ಹರಡಿಬಿಟ್ಟಿದೆ. ಏನದು ಸುದ್ದಿ ಎಂಬ ಕುತೂಹಲವಾ? ಹಾಗಿದ್ದರೆ ಓದಿ. ಏನೆಂದರೆ, ಚಿತ್ರವು ಮೇ 21ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಯಾರೋ ತೇಲಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ‘ಯುವರತ್ನ’ ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಈ ವಿಷಯವನ್ನು ಟ್ವೀಟ್ ಮಾಡಿದ್ದಾರೆ ಎನ್ನುವಂತೆ ಯಾಮಾರಿಸಿದ್ದಾರೆ. ಹೇಳಿಕೇಳಿ, ಇಂದು ಏಪ್ರಿಲ್ ಫೂಲ್ ದಿನ. ಹಾಗಾಗಿ ಸಂತೋಷ್ ಟ್ವೀಟ್ ಮಾಡಿದಂತೆ ಯಾರೋ ಪುನೀತ್ ಅಭಿಮಾನಿಗಳಿಗೆ ಏಪ್ರಿಲ್ ಫೂಲ್ ಮಾಡಿದ್ದಾರೆ.

ಇದನ್ನು ನೋಡಿ ಸಿಟ್ಟಾಗಿರುವ ಸಂತೋಷ್ ಆನಂದರಾಮ್, ಇದೊಂದು ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡುವುದರ ಜತೆಗೆ, ಚಿತ್ರದ ಬಿಡುಗಡೆ ದಿನಾಂಕವನ್ನು ಹೋಂಬಾಳೆ ಫಿಲಂಸ್ ಅಧಿಕೃತವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಇದು ತಪ್ಪು ಮಾಹಿತಿ. ಇನ್ನೂ ಎರಡು ಹಾಡುಗಳ ಚಿತ್ರೀಕರಣವಿದ್ದು, ಪೋಸ್ಟ್ ಪ್ರೊಡಕ್ಷನ್ ಮುಗಿದಾದ ಮೇಲೆ ಬಿಡುಗಡೆಯ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ. ‘ಯುವರತ್ನ’ ಬಿಗ್ಗೆಸ್ಟ್ ರಿಲೀಸ್ ಆಗಿದ್ದು, ಪಬ್ಲಿಸಿಟಿ, ಆಡಿಯೋ-ಟ್ರೈಲರ್ ರಿಲೀಸ್ ಎಲ್ಲದಕ್ಕೂ ದೊಡ್ಡ ಪ್ಲಾನ್ಸ್ ಇರುವುದರಿಂದ ದಿನಾಂಕ ನಿಗದಿತವಾಗಿಲ್ಲ’ ಎಂದು ಸಂತೋಷ್ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net