

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮುಖ್ಯಭೂಮಿಕೆ ನಿಭಾಯಿಸಿದ್ದ, ಲವ್ ಮಾಕ್‌ಟೇಲ್ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ಬಳಿಕ ಅಮೆಜಾನ್ ಪ್ರೈಮ್‌ನಲ್ಲೂ ರಿಲೀಸ್ ಆಗಿ ಸದ್ದು ಮಾಡಿತ್ತು. ಈಗ ಟಾಲಿವುಡ್ ನಟನಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಅಷ್ಟೇ ಅಲ್ಲ ಚಿತ್ರವನ್ನು ಕೊಂಡಾಡಿದ ರೀತಿ ನೋಡಿದರೆ, ಸ್ವತಃ ಅವರೇ ತೆಲುಗು ರಿಮೇಕ್‌ನಲ್ಲಿ ನಟಿಸಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿವೆ. ಹಾಗಾದರೆ ಯಾರು ಆ ನಟ? ಬೇರಾರು ಅಲ್ಲ, ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್.
ಹೌದು, ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ವೀಕ್ಷಿಸಿರುವ ಅಲ್ಲು ಸಿರೀಶ್, ಚಿತ್ರದ ನಿರ್ದೇಶಕ ಮತ್ತು ನಾಯಕ ಡಾರ್ಲಿಂಗ್ ಕೃಷ್ಣ ಅವರಿಗೆ ಮೆಚ್ಚುಗೆ ಮಹಾಪೂರವನ್ನೇ ಹರಿಸಿದ್ದಾರೆ. ‘ಪ್ರೈಮ್‌ನಲ್ಲಿ ಲವ್ ಮಾಕ್‌ಟೇಲ್ ಸಿನಿಮಾ ವೀಕ್ಷಿಸಿದೆ. ಹಾಸ್ಯ ಮತ್ತು ಅಷ್ಟೇ ಭಾವುಕವಾಗಿ ಸಿನಿಮಾ ಕಾಡುತ್ತದೆ. 90 ಮತ್ತು 2000 ಮಕ್ಕಳಿಗೆ ಈ ಚಿತ್ರ ಹೇಳಿ ಮಾಡಿಸಿದಂತಿದೆ. ಟ್ಯೂಷನ್ ಕ್ರಷ್, ಎಸ್‌ಎಂಎಸ್, ಗಲ್ಲಿ ಕ್ರಿಕೆಟ್ ಇದೆಲ್ಲವನ್ನು ನೋಡುತ್ತಿದ್ದರೆ ನನ್ನ ಆಗಿನ ದಿನಗಳೇ ನೆನಪಿಗೆ ಬರುತ್ತಿವೆ’ ಎಂದಿದ್ದಾರೆ. ಹೀಗೆ ಹೇಳಿದ್ದಕ್ಕೆ ಅವರ ಟ್ವಿಟ್ ಅನ್ನು ಮರು ಟ್ವಿಟ್ ಮಾಡಿ ನಮ್ಮ ಸಿನಿಮಾ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ ಎಂದಿದ್ದರು ಕೃಷ್ಣ. ಅದಾದ ಬಳಿಕ, ನಿಮ್ಮ ನಟನೆ ಮತ್ತು ನಿರ್ದೇಶನ ನಿಜಕ್ಕೂ ಸೂಪರ್ ಎಂದು ಕನ್ನಡದಲ್ಲಿ ಧನ್ಯವಾದಗಳು ಎಂದಿದ್ದಾರೆ ಅಲ್ಲು ಸಿರೀಶ್.
ಸದ್ಯ ಇಷ್ಟೆಲ್ಲ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಮಾತುಗಳ ಸಂದಾಯವಾಗಿದ್ದು, ಇನ್ನೊಂದು ಕಡೆ, ರಿಮೇಕ್ ಹಕ್ಕುಗಳನ್ನೂ ಸಿರೀಶ್ ಕೇಳಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಸ್ವತಃ ಸಿರೀಶ್ ನಾಯಕರಾಗಿ ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆಗಳೂ ದಟ್ಟವಾಗಿವೆ.