

ಚೆನ್ನೈ: ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಚಿತ್ರಗಳಲ್ಲಿ ಹೆಚ್ಚುಹೆಚ್ಚು ನಟಿಸುತ್ತಿರುವ ಸಂಜಯ್ ದತ್, ಈಗ ವಿಜಯ್ ಅಭಿನಯದ ತಮಿಳು ಚಿತ್ರ 'ಲಿಯೋ'ದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಚಿತ್ರೀಕರಣಕ್ಕೂ ಹಾಜರಾಗಿದ್ದಾರೆ.
'ಲಿಯೋ' ಚಿತ್ರದ ಚಿತ್ರೀಕರಣ ಇತ್ತೀಚೆಗೆ ಕಾಶ್ಮೀರದಲ್ಲಿ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಮುಂಬೈನಿಂದ ಕಾಶ್ಮೀರಕ್ಕೆ ಹಾರಿರುವ ಸಂಜಯ್ ದತ್, ವಿಮಾನ ನಿಲ್ದಾಣದಿಂದ ನೇರವಾಗಿ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರನ್ನು ವಿಜಯ್, ಲೋಕೇಶ್ ಕನಕರಾಜ್ ಮುಂತಾದವರು ಬರಮಾಡಿಕೊಂಡಿದ್ದಾರೆ. ಚಿತ್ರತಂಡದವರ ಜತೆಗೆ ಕುಳಿತು ಚಹಾ ಕುಡಿದು, ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಸಂಜಯ್ ದತ್. ಈ ವಿಡಿಯೋವನ್ನು ಚಿತ್ರತಂಡದವರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗಿದ್ದರೂ, ಈಗಾಗಲೇ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ವರ್ಷದ ಅಕ್ಟೋಬರ್ 19ರಂದು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಮತ್ತು ಮನೋಜ್ ಪರಮಹಂಸ ಛಾಯಾಗ್ರಹಣ ಮಾಡುತ್ತಿದ್ದಾರೆ.
'ಲಿಯೋ' ಚಿತ್ರದಲ್ಲಿ ವಿಜಯ್ ಮತ್ತು ಸಂಜಯ್ ದತ್ ಜತೆಗೆ ತ್ರಿಷಾ ಕೃಷ್ಣನ್, ಅರ್ಜುನ್ ಸರ್ಜಾ, ಜಗದೀಶ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.