ಶೂಟಿಂಗ್​ನಲ್ಲಿ ಭಾಗವಹಿಸಿದ ಸಂಜಯ್​ ದತ್​ ... ಯಾವ ಚಿತ್ರ ಗೊತ್ತಾ?

Sanjay Dutt - Final
Published on

ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿರುವ ಸಂಜಯ್​ ದತ್​, ಸದ್ದಿಲ್ಲದೆ ಹೊರಗೆ ಬಂದು ಶೂಟಿಂಗ್​ವೊಂದರಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಭಾಗದ ಚಿತ್ರೀಕರಣವನ್ನು ಸಹ ಮುಗಿಸಿ ಹೋಗಿದ್ದಾರೆ.

ಇಷ್ಟಕ್ಕೂ ಯಾವ ಚಿತ್ರ ಗೊತ್ತಾ ಅದು. ಯಶ್​ರಾಜ್​ ಫಿಲಂಸ್​ ನಿರ್ಮಾಣದ 'ಶಂಶೇರಾ'. ಕರಣ್​ ಮಲ್ಹೋತ್ರಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್​ ಕಪೂರ್​, ವಾಣಿ ಕಪೂರ್​, ರೋನಿತ್​ ರಾಯ್​, ಇರಾವತೆ ಹರ್ಷೆ ಸೇರಿದಂತೆ ಹಲವು ಪ್ರತಿಭಾವಂತರು ನಟಿಸುತ್ತಿದ್ದಾರೆ. ಸಂಜಯ್​ ದತ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲಾಕ್​ಡೌನ್​ಗೂ ಮುನ್ನ, ಸಂಜಯ್​ ದತ್​ ಅಭಿನಯದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಇನ್ನೆರೆಡು ದಿನಗಳ ಪ್ಯಾಚ್​ವರ್ಕ್​ ಮುಗಿದಿದ್ದರೆ, ಸಂಜಯ್​ ದತ್​ ಕೆಲಸ ಸಂಪೂರ್ಣವಾಗುತಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಎಲ್ಲಾ ಕೆಲಸ ನಿಂತು ಹೋಯಿತು.

ಈಗ ಲಾಕ್​ಡೌನ್​ ತೆರವಾದರೂ, ಸಂಜಯ್​ ದತ್​ ಕ್ಯಾನ್ಸರ್​ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ, ತಮ್ಮ ಭಾಗದ ಎರಡು ದಿನಗಳ ಕೆಲಸವನ್ನು ಸಂಜಯ್​ ದತ್​ ಮುಗಿಸಿಕೊಟ್ಟಿದ್ದಾರೆ. ಸೋಮವಾರವಷ್ಟೇ ಅವರು ಯಶ್​ರಾಜ್​ ಸ್ಟುಡಿಯೋಸ್​ಗೆ ಹೋಗಿ ತಮ್ಮ ಕೆಲಸವನ್ನು ಮುಗಿಸಿಕೊಟ್ಟು ವಾಪಸ್ಸಾಗಿದ್ದಾರೆ.

ಮೊದಲೇ ಕರೊನಾ ಹಾವಳಿ ಜಾಸ್ತಿಯಾಗುತ್ತಿದೆ. ಮೇಲಾಗಿ ಸಂಜಯ್​ ದತ್​ ಅವರಿಗೆ ಅನಾರೋಗ್ಯ. ಹಾಗಾಗಿ ಬಹಳ ಕಟ್ಟುನಿಟ್ಟಿನ ಮುನ್ನೆಚರಿಕೆಗಳನ್ನು ತೆಗೆದುಕೊಂಡು ಸಂಜಯ್​ ಭಾಗದ ಚಿತ್ರೀಕರಣ ಮಾಡಲಾಗಿದೆಯಂತೆ.

ಅಂದಹಾಗೆ, 'ಶಂಶೇರಾ' ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಕ್ಕೆ ಯಶ್​ರಾಜ್​ ಫಿಲಂಸ್​ ಚಿಂತನೆ ನಡೆಸಿದ್ದು. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಪ್ರಾರಂಭವಾದ ಮೇಲಷ್ಟೇ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net