

ಹೈದರಾಬಾದ್: ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಎಂಬ ವಿಷಯ ಕೇಳಿ, ಇನ್ನು ಅವರಿಗೆ 'ಕೆಜಿಎಫ್ 2' ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಪ್ರಶ್ನೆ ಹಲವರಲ್ಲಿತ್ತು. ಸಂಜಯ್ ದತ್ ಅವರು 'ಕೆಜಿಎಫ್ 2' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವುದಷ್ಟೇ ಅಲ್ಲ, ತಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಹೈದರಾಬಾದ್ನಲ್ಲಿ 'ಕೆಜಿಎಫ್ 2' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆ ಫೈಟ್ ಇದೀಗ ಮುಗಿದಿದೆ. ಅಷ್ಟೇ ಅಲ್ಲ, ದತ್ ಅವರು ಚಿತ್ರತಂಡದವರ ಜತೆಗೆ ನಿಂತು ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಅನಾರೋಗ್ಯದ ನಡುವೆಯೂ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿದ್ದಿಕ್ಕೆ ನಿರ್ದೇಶಕ ಪ್ರಶಾಂತ್ ಸೇರಿ, ಚಿತ್ರತಂಡದ ಹಲವರು ಅವರಿಗೆ ಧನ್ಯವಾದ ಹೇಳಿದ್ದಾರೆ.
ಈ ಕ್ಲೈಮ್ಯಾಕ್ಸ್ ಫೈಟ್ ಮುಕ್ತಾಯದ ಮೂಲಕ ಹೈದರಾಬಾದ್ ಭಾಗದ ಚಿತ್ರೀಕರಣ ಸಹ ಮುಗಿದಿದೆ. ಇನ್ನೊಂದು ದಿನದ ಪ್ಯಾಚ್ವರ್ಕ್ ಬಾಕಿ ಇದ್ದು, ಅದು ಸಹ ಸದ್ಯದಲ್ಲೇ ಮುಗಿಯಲಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಚಿತ್ರದಲ್ಲಿ 'ಅಧೀರ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್, ಡ್ಯೂಪ್ ಬಳಸದೆ ಫೈಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಣಿಯಲ್ಲಿ ನಡೆಯುವ ಫೈಟ್ ಇದಾಗಿದ್ದು, ರಾಕಿ ಭಾಯ್ ಮತ್ತು ಅಧೀರ ಈ ಫೈಟ್ನಲ್ಲಿ ಮುಖಾಮುಖಿಯಾಗುತ್ತಾರಂತೆ. ಬಹುತೇಕ ಚಿತ್ರಗಳಲ್ಲಿ ಡ್ಯೂಪ್ಗಳ ಮೊರೆ ಹೋಗದೆ, ತಾವೇ ಸ್ವತಃ ಸ್ಟಂಟ್ ಮಾಡುತ್ತಿದ್ದರು. ಈಗಲೂ ಅದನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು, 'ಕೆಜಿಎಫ್ 2' ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದು, ಅನ್ಬರಿವ್ ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಅನ್ಬುಮಣಿ ಮತ್ತು ಅರಿವುಮಣಿ ಎಂಬ ಸಹೋದರರು. 'ಕೆಜಿಎಫ್ 1' ಚಿತ್ರಕ್ಕೂ ಅನ್ಬರಿವ್ ಸಾಹಸ ಸಂಯೋಜನೆ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಅವರು ಅತ್ಯುತ್ತಮ ಸಾಹಸನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈಗ ಎರಡನೆಯ ಭಾಗದ ಕ್ಲೈಮ್ಯಾಕ್ಸ್ ಫೈಟ್ನ್ನೂ ಅವರೇ ಮಾಡಿಸಿದ್ದು, ಬಹಳ ವಿಶೇಷವಾಗಿ ಮೂಡಿಬಂದಿದೆ ಎಂಬ ಸುದ್ದಿ ಇದೆ.