ಐಶ್ವರ್ಯಾ ಚಿತ್ರರಂಗಕ್ಕೆ ಬರಬಾರದು ಅಂತ ಸಂಜಯ್ ದತ್ ಆಸೆಪಟ್ಟಿದ್ದೇಕೆ?

Sanjay - Aishwarya
Published on

ಐಶ್ವರ್ಯಾ ರೈ ಮತ್ತು ಸಂಜಯ್ ದತ್ ಜತೆಯಾಗಿ ನಟಿಸಿದ್ದು ಕಡಿಮೆಯೇ. ಎರಡೋ, ಮೂರೋ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರೆ, ಅದೇ ಹೆಚ್ಚು. ಆದರೆ, ಸಂಜಯ್‌ಗೆ ಐಶ್ವರ್ಯಾ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚಿಂದ ಗೊತ್ತಂತೆ. ಅಷ್ಟೇ ಅಲ್ಲ, ಐಶ್ವರ್ಯಾ ಚಿತ್ರರಂಗಕ್ಕೆ ಬರಬಾರದು ಎಂದು ಸಂಜಯ್ ಆಸೆ ಪಟ್ಟಿದ್ದರಂತೆ.

ಈ ಕುರಿತು ಅವರೇ ಕೆಲವು ವರ್ಷಗಳ ಹಿಂದೆ, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಸಂಜಯ್‌ಗೆ ಯಾಕೆ ಐಶ್ವರ್ಯಾ ಚಿತ್ರರಂಗಕ್ಕೆ ಬರಬಾರದು ಎಂಬ ಆಸೆ ಇತ್ತು ಎಂದರೆ, ಅದಕ್ಕೆ ಅವರದ್ದೇ ಆದ ಕೆಲವು ಕಾರಣಗಳಿವೆ. ಆ ಕಾರಣಗಳನ್ನು ಅವರೇ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಅದೊಂದು ದಿನ ನನ್ನ ತಂಗಿ ಆಕೆಯ ೆಟೋ ತೋರಿಸಿದಳು. ಅವಳಿಗೆ ಐಶ್ವರ್ಯಾ ರೈ ಕಂಡರೆ ಬಹಳ ಇಷ್ಟ. ಅವರ ಜತಗೆ ಸ್ನೇಹವೂ ಇತ್ತಂತೆ. ನನಗೆ ಹೆಚ್ಚು ಗೊತ್ತಿರಲಿಲ್ಲ. ಕೋಲಾ ಜಾಹೀರಾತಿನಲ್ಲಿ ಮಾತ್ರ ನೋಡಿದ್ದೆ. ಆಗ ಆಕೆಯಿಂದ ದೂರ ಇರು, ಆಕೆಯ ನಂಬರ್ ಕೇಳಬೇಡ, ಹೂವು ಕಳಿಸಬೇಡ ಎಂದು ಕಿಚಾಯಿಸಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ದತ್.

ಆಗಲೇ ಐಶ್ವರ್ಯಾ ಬಗ್ಗೆ ಕೆಲವು ಮಾತುಗಳನ್ನಾಡಿದ್ದರಂತೆ ಸಂಜಯ್. ಆಕೆ ಚಿತ್ರರಂಗಕ್ಕೆ ಬರಬಾರದು ಎಂದು ಆಸೆಪಟ್ಟಿದ್ದರಂತೆ. ‘ಈ ಗ್ಲಾಮರ್ ಲೋಕ ಎಲ್ಲರನ್ನೂ ಬದಲಾಯಿಸಿ ಬಿಡುತ್ತದೆ.ಮುಗ್ಧತೆಯನ್ನು ಹಾಳು ಮಾಡಿಬಿಡುತ್ತದೆ. ಒಳ್ಳೆಯತನ ಹೊರಟುಹೋಗುತ್ತದೆ. ಏಕೆಂದರೆ, ಒಮ್ಮೆ ಇಲ್ಲಿ ಕಾಲಿಟ್ಟ ನಂತರ, ನಾನು ಅವರಿಗಿಂಥ ಚೆನ್ನಾಗಿ ಕಾಣಿಸಿಕೊಳ್ಳಬೇಕು, ಚೆನ್ನಾಗಿ ನಟಿಸಬೇಕು, ಇನ್ನಷ್ಟು ಮೇಲೆ ಹೋಗಬೇಕು ಎಂದು ಸ್ಪರ್ಧೆ ಶುರುವಾಗಿಬಿಡುತ್ತದೆ. ಎರಡು ಹೆಜ್ಜೆ ಮುಂದಿಟ್ಟರೆ, ಐದು ಹೆಜ್ಜೆ ಹಿಂದೆ ಇಡುವಷ್ಟು ಜನ ಕಾಲೆಳೆಯುತ್ತಾರೆ. ಆಗ ಮನಸ್ಸು ಕಲ್ಲಾಗಿ, ಒಳ್ಳೆಯ ಗುಣಗಳೆಲ್ಲಾ ನಾಶವಾಗುತ್ತವೆ. ಹಾಗಾಗಿ ಐಶ್ವರ್ಯರಂಥವರು ಚಿತ್ರರಂಗಕ್ಕೆ ಬರಬಾರದು ಎಂದು ಹೇಳಿದ್ದೆ’ ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ ಸಂಜಯ್.

ಐಶ್ವರ್ಯಾ ಚಿತ್ರರಂಗಕ್ಕೆ ಬರಬಾರದು ಎಂದು ಆಸೆಪಟ್ಟಿದ್ದರೂ, ಆಕೆ ಮಾತ್ರ ಚಿತ್ರರಂಗಕ್ಕೆ ಬಂದು ದೊಡ್ಡ ಹೆಸರು ಮಾಡಿದರು. ಹಾಗೆಯೇ, ಸಾಕಷ್ಟು ನೋವು-ನಲಿವುಗಳನ್ನೂ ನೋಡಿದರು. ಈಗ ಚಿತ್ರರಂಗದಲ್ಲಿ ಇದ್ದೂಇಲ್ಲದಂತಿರುವ ಐಶ್ವರ್ಯಾ, ಗಂಡ-ಮನೆ-ಮಗಳು ಎಂದು ನೆಮ್ಮದಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net