

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಬಂಧಿತರಾದ ಬಳಿಕ ಸಮಾನದುಃಖಿಗಳಂತೆ ಕಾಣುತ್ತಿರುವ ಸ್ಯಾಂಡಲ್ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿ ಹಳೆಯ ದ್ವೇಷ-ಮನಸ್ತಾಪ ಮರೆತು ಸ್ನೇಹಿತೆಯರಾಗಿರುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಬಂಧಿತರಾದ ನಂತರ ಇಷ್ಟು ದಿನಗಳ ಕಾಲ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಟ್ಟಿಗೇ ಇದ್ದ ಈ ಇಬ್ಬರೂ ನಟಿಮಣಿಯರು ಸೋಮವಾರ ಪರಸ್ಪರ ಅಗಲುವ ಸಮಯದಲ್ಲಿ ಮನಕಲಕುವ ದೃಶ್ಯಕ್ಕೆ ಕಾರಣರಾದರು.
ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಇತರ ಆರೋಪಿಗಳ ಜತೆ ಸೋಮವಾರ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ರಾಗಿಣಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಸಂಜನಾಗೆ ಪೊಲೀಸ್ ಕಸ್ಟಡಿ ವಿಧಿಸಿದರು. ಹೀಗಾಗಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವುದು ಅನಿವಾರ್ಯವಾಯಿತು. ಸಂಜನಾ ಮತ್ತಷ್ಟು ದಿನಗಳ ಕಾಲ ಸಾಂತ್ವನ ಕೇಂದ್ರದಲ್ಲೇ ಇರುವುದು ನಿಕ್ಕಿಯಾಯಿತು.
ರಾಗಿಣಿಯನ್ನು ಜೈಲಿಗೆ ಸ್ಥಳಾಂತರಿಸುವ ಮೊದಲು ಆದೇಶದ ಪ್ರತಿಯನ್ನು ಪಡೆಯುವುದಕ್ಕೆ ಮತ್ತು ರಾಗಿಣಿ ತಮ್ಮ ಬಟ್ಟೆ-ಬರೆ ಪ್ಯಾಕ್ ಮಾಡಿಕೊಳ್ಳುವುದಕ್ಕೆ ಸಮಯ ಬೇಕಾಗಿದ್ದುದರಿಂದ ಪೊಲೀಸರು ಇಬ್ಬರನ್ನೂ ಮತ್ತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತಂದರು. ಸ್ವಲ್ಪ ಸಮಯದ ನಂತರ ಇಬ್ಬರೂ ಅಗಲುವುದು ಖಚಿತವಾದ್ದರಿಂದ ಸಂಜನಾ ಮತ್ತು ರಾಗಿಣಿ ಪರಸ್ಪರ ತಬ್ಬಿಕೊಂಡು ಗದ್ಗದಿತರಾದರು ಎಂದು ಮೂಲಗಳು ತಿಳಿಸಿವೆ.