ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ವಿಧಿವಶ! Sowcar Janaki
ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ವಿಧಿವಶ! Sowcar Janaki
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಖ್ಯಾತ ಹಿರಿಯ ನಟಿ ಪದ್ಮಶ್ರೀ ಸಾಹುಕಾರ್ ಜಾನಕಿ ವಯೋಸಹಜ ಅನಾರೋಗ್ಯದಿಂದ ನಿಧನ
ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ 94 ವರ್ಷದ ನಟಿ
ತಮಿಳು ತೆಲುಗು ಕನ್ನಡ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಮುದ್ರೆಯೊತ್ತಿದ ದಿಗ್ಗಜೆ
ತೇನಾಂಪೇಟೆಯ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಚೆನ್ನೈ: ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ಅಚ್ಚಳಿಯದ ಮುದ್ರೆಯೊತ್ತಿದ್ದ ಪದ್ಮಶ್ರೀ ಪುರಸ್ಕೃತೆ, ಖ್ಯಾತ
ಹಿರಿಯ
ನಟಿ ಸಾಹುಕಾರ್ ಜಾನಕಿ ( Sowcar Janaki ) ಅವರು ವಯೋಸಹಜ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಇಂದು (ಆಗಸ್ಟ್ 21) ನಿಧನರಾಗಿದ್ದಾರೆ. ಜಾನಕಿ ಅವರಿಗೆ 94 ವರ್ಷ ವಯಸ್ಸಾಗಿತ್ತು.
ಸಾಹುಕಾರ್ ಜಾನಕಿ ಅವರ ನಿಧನದ ಸುದ್ದಿಯನ್ನು ನಾಡಿಗರ್ ಸಂಘದ ಅಧ್ಯಕ್ಷರಾದ ನಾಜರ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಆಳ್ವಾರಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಅವರು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಲೇ ಕೊನೆಯುಸಿರೆಳೆದರು ಎಂದು ನಾಜರ್ ಅವರು ತಿಳಿಸಿದ್ದಾರೆ.
ಜಾನಕಿ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯು ಆಗಸ್ಟ್ 19 ರಂದು ಹೊರಬಂದಿತ್ತು. ಚೆನ್ನೈನ ತೇನಾಂಪೇಟೆಯ ಸೆಂಟಾಫ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ಸಂಜೆ 5 ಗಂಟೆಯಿಂದ ಇರಿಸಲಾಗುವುದು ಎಂದು ತಮಿಳುನಾಡಿನ ಕಲಾವಿದರ ಸಂಘವು ತಿಳಿಸಿದೆ. ವರಮಹಾಲಕ್ಷ್ಮೀ ಹಬ್ಬದಂದೇ ಸಿನಿಮಾ ರಂಗದ ಪ್ರಮುಖ ಕೊಂಡಿಯೊಂದು ಕಳಚಿಕೊಂಡಿದ್ದು, ಅನೇಕ ಕಲಾವಿದರು ದುಃಖದಲ್ಲಿ ಮುಳುಗಿದ್ದಾರೆ.
ಏಳು ದಶಕಗಳಿಗೂ ಅಧಿಕ ಕಾಲದ ಸುದೀರ್ಘ ನಟನಾ ವೃತ್ತಿಜೀವನದಲ್ಲಿ, ಸಾಹುಕಾರ್ ಜಾನಕಿ ಅವರು ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ಹಲವಾರು ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅವರು, ಅನೇಕ ನಾಟಕಗಳು ಮತ್ತು ರಂಗಮಂಚಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
1950ರಲ್ಲಿ ಎಲ್.ವಿ. ಪ್ರಸಾದ್ ನಿರ್ದೇಶನದ ತೆಲುಗು ಚಿತ್ರ 'ಸಾವುಕಾರು' ಮೂಲಕ ನಟನೆ ಆರಂಭಿಸಿದ ಜಾನಕಿ ಅವರಿಗೆ ಆ ಚಿತ್ರದ ಯಶಸ್ಸಿನಿಂದಲೇ 'ಸಾಹುಕಾರ್' ಎಂಬ ಅಂಕಿತನಾಮ ಸಿಕ್ಕಿತು. 1952ರಲ್ಲಿ 'ವಲಯಪತಿ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಅವರು, ವಿವಿಧ ಭಾಷೆಗಳಲ್ಲಿ ಪ್ರಮುಖ ನಾಯಕಿಯಾಗಿ ಹಲವು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರಸಿದ್ಧ ನಟಿಯಾಗಿ ಹೊರಹೊಮ್ಮಿದರು. ಕನ್ನಡದಲ್ಲಿ ಶಬ್ದವೇದಿ, ಅಭಿ, ಒಂದೇ ಗುರಿ, ಗೀತಾ, ಕುಲಪುತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.
ಸಿನಿಮಾಗಳಲ್ಲದೆ 3000ಕ್ಕೂ ಹೆಚ್ಚು ರಂಗ ನಾಟಕಗಳಲ್ಲಿ ಅಭಿನಯಿಸಿರುವ ಅವರು ಕಲಾ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ಸರ್ಕಾರಗಳಿಂದ ಹಲವು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಅವರು, 2020ರಲ್ಲಿ ತಮ್ಮ 400ನೇ ಚಲನಚಿತ್ರವಾದ 'ಬಿಸ್ಕೋತ್' ನಲ್ಲಿ ಕಾಣಿಸಿಕೊಂಡರು. ಭಾರತೀಯ ಕಲೆ ಮತ್ತು ಚಲನಚಿತ್ರರಂಗಕ್ಕೆ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2022ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಶ್ರೀ' ನೀಡಿ ಗೌರವಿಸಿತು.