ಅತಿಯಾದ ಹಿಂಸಾಚಾರ, ಅಶ್ಲೀಲತೆ... ಟಾಕ್ಸಿಕ್​ ಸಿನಿಮಾ ವಿರುದ್ಧ ಕೆ. ಅಣ್ಣಾಮಲೈ ಅಸಮಾಧಾನ, ಸೆನ್ಸಾರ್​ ವಿರುದ್ಧ ಆಕ್ರೋಶ! Toxic

ಅತಿಯಾದ ಹಿಂಸಾಚಾರ, ಅಶ್ಲೀಲತೆ... ಟಾಕ್ಸಿಕ್​ ಸಿನಿಮಾ ವಿರುದ್ಧ ಕೆ. ಅಣ್ಣಾಮಲೈ ಅಸಮಾಧಾನ, ಸೆನ್ಸಾರ್​ ವಿರುದ್ಧ ಆಕ್ರೋಶ! Toxic
ಅತಿಯಾದ ಹಿಂಸಾಚಾರ, ಅಶ್ಲೀಲತೆ... ಟಾಕ್ಸಿಕ್​ ಸಿನಿಮಾ ವಿರುದ್ಧ ಕೆ. ಅಣ್ಣಾಮಲೈ ಅಸಮಾಧಾನ, ಸೆನ್ಸಾರ್​ ವಿರುದ್ಧ ಆಕ್ರೋಶ! Toxic
Published on

ಪ್ರಮುಖ ಮುಖ್ಯಾಂಶಗಳು

  • ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಕುರಿತು ಪರ ವಿರೋಧ ಚರ್ಚೆ
  • ಪ್ರಮಾಣೀಕರಣ ಮಾನದಂಡ ಕಠಿಣಗೊಳಿಸಲು ಕೆ ಅಣ್ಣಾಮಲೈ ಆಗ್ರಹ
  • ವಯಸ್ಕರ ಸಿನಿಮಾಗಳಿಗೆ ಮಕ್ಕಳ ಪ್ರವೇಶದ ಬಗ್ಗೆ ತೀವ್ರ ಆಕ್ಷೇಪ
  • ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಭರ್ಜರಿ ಗಳಿಕೆ ಕಂಡ ಸಿನಿಮಾ
  • ಮಿಶ್ರ ಪ್ರತಿಕ್ರಿಯೆ ನಡುವೆ ಎರಡನೇ ದಿನ ಕಲೆಕ್ಷನ್ ಕುಸಿತ
ಚೆನ್ನೈ: ರಾಕಿಂಗ್​ ಸ್ಟಾರ್​ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಬಿಡುಗಡೆಯಾದ ದಿನದಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಟಾಕ್ಸಿಕ್​ ಎರಡನೇ ದಿನ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ. ಇದೆಲ್ಲದರ ನಡುವೆ ಈ ಸಿನಿಮಾ ವಿವಾದಗಳ ಸುಳಿಗೂ ಸಿಲುಕಿದೆ. ಚಿತ್ರದಲ್ಲಿರುವ ಹಿಂಸಾಚಾರ ಮತ್ತು ಸ್ತ್ರೀ ವಿರೋಧಿ ವಿಷಯಗಳ ಕುರಿತು ಪರ-ವಿರೋಧ ಚರ್ಚೆಗಳು ಜೋರಾಗಿವೆ. ಇದರ ಬೆನ್ನಲ್ಲೇ ರಾಜಕೀಯ ವಲಯದಲ್ಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಮಾಜಿ ಐಪಿಎಸ್​ ಅಧಿಕಾರಿ ಹಾಗೂ ರಾಜಕಾರಣಿ ಕೆ. ಅಣ್ಣಾಮಲೈ ಅವರು ಸೆನ್ಸಾರ್ ಮಂಡಳಿಯ ಕಾರ್ಯವೈಖರಿ ಹಾಗೂ ಚಿತ್ರಮಂದಿರಗಳ ನಿರ್ಲಕ್ಷ್ಯದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆ. ಅಣ್ಣಾಮಲೈ, 'ಟಾಕ್ಸಿಕ್' ಸಿನಿಮಾ ಹೆಸರನ್ನು ಪ್ರಸ್ತಾಪಿಸುತ್ತಾ ಭಾರತೀಯ ಚಲನಚಿತ್ರಗಳ ಪ್ರಮಾಣೀಕರಣ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅತಿರೇಕದ ಹಿಂಸಾಚಾರ, ಆತಂಕಕಾರಿ ದೃಶ್ಯಗಳು ಮತ್ತು ಸ್ತ್ರೀ ವಿರೋಧಿ ಧೋರಣೆಗಳ ವಿರುದ್ಧ ಅಣ್ಣಾಮಲೈ ಅವರು ಗಂಭೀರ ಕಳಕಳಿ ವ್ಯಕ್ತಪಡಿಸಿದ್ದಾರೆ.
ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ವಸ್ತುಗಳಂತೆ ಬಿಂಬಿಸುವುದನ್ನು ಮತ್ತು ಸ್ತ್ರೀ ವಿರೋಧಿ ವಿಚಾರಗಳನ್ನು ವಿಜೃಂಭಿಸುವುದನ್ನು ಅಣ್ಣಾಮಲೈ ಬಹಿರಂಗವಾಗಿ ಟೀಕಿಸಿದ್ದಾರೆ. ಪುರುಷರು ಅನೇಕ ಮಹಿಳೆಯರನ್ನು ಇಟ್ಟುಕೊಳ್ಳುವಂತಹ ದೃಶ್ಯಗಳು ಸಮಾಜದ ನಿಜವಾದ ಬೆಳವಣಿಗೆಗೆ ಹಿನ್ನಡೆ ಉಂಟುಮಾಡುತ್ತವೆ ಎಂದು ವಾದಿಸಿದ್ದಾರೆ. ಸಮಾಜದ ಸಂಸ್ಕೃತಿಯನ್ನು ರೂಪಿಸುವಲ್ಲಿ ಸಿನಿಮಾಗಳು ಅಪಾರ ಶಕ್ತಿಯನ್ನು ಹೊಂದಿದ್ದು, ನಿರ್ಮಾಪಕರು ಆ ಶಕ್ತಿಯನ್ನು ಸಮಾಜದ ಸಬಲೀಕರಣಕ್ಕೆ ಬಳಸಬೇಕೇ ಹೊರತು ದಿಕ್ಕು ತಪ್ಪಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಸ್ಟಾರ್ ನಟರಿದ್ದರೂ, ಸೆನ್ಸಾರ್ ಮಂಡಳಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದಾರೆ. ತಾವು ಯಾವುದೇ ಸಿನಿಮಾದ ನಿಷೇಧಕ್ಕೆ ಒತ್ತಾಯಿಸುತ್ತಿಲ್ಲ ಬದಲಿಗೆ ಸೆನ್ಸಾರ್ ಕಠಿಣವಾಗಬೇಕು ಎಂದಷ್ಟೇ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಮುಖವಾಗಿ ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು 'ಎ' (A) ಪ್ರಮಾಣಪತ್ರ ಪಡೆದ ವಯಸ್ಕರ ಸಿನಿಮಾಗಳಿಗೆ ಅಪ್ರಾಪ್ತ ವಯಸ್ಕರನ್ನು ಒಳಬಿಡುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಅವರು ಕಳಕಳಿಯ ಮನವಿ ಮಾಡಿದ್ದಾರೆ.

ಅಣ್ಣಾಮಲೈ ಅವರ ಹೇಳಿಕೆಗೆ ಸಾಕ್ಷಿಯಾಗಿ ಒಂದು ವಿವಾದಾತ್ಮಕ ಘಟನೆಯು ಕೂಡ ನಡೆದಿದೆ. ಚಿತ್ರಮಂದಿರವೊಂದರಲ್ಲಿ ಮಹಿಳೆಯೊಬ್ಬರ ಮಡಿಲಲ್ಲಿ ಸಣ್ಣ ಮಗು ಕೂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಯಿತು. ವಯಸ್ಕರಿಗೆ ಮಾತ್ರ ಮೀಸಲಾದ ಮತ್ತು ಹಿಂಸಾಚಾರದ ದೃಶ್ಯಗಳಿರುವ 'ಎ' ಪ್ರಮಾಣಪತ್ರ ಪಡೆದ ಚಿತ್ರದ ಪ್ರದರ್ಶನಕ್ಕೆ ಅಂತಹ ಚಿಕ್ಕ ಮಗುವನ್ನು ಹೇಗೆ ಬಿಡಲಾಯಿತು ಎಂದು ನೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಟಾಕ್ಸಿಕ್​ ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಗಸ್ಟ್ 26ರಂದು ಬಿಡುಗಡೆಯಾದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್​ ಪ್ರೊಡಕ್ಷನ್​ ಬಂಡವಾಳ ಹೂಡಿದೆ.ನಟ ಯಶ್ ಕೂಡ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ, ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್​ ಮುಂತಾದ ದೊಡ್ಡ ತಾರಾಗಣವಿದೆ. ಈ ಚಿತ್ರದಲ್ಲಿ ಅತಿಯಾಗ ಹಿಂಸಾಚಾರ ಹಾಗೂ ಅಶ್ಲೀಲತೆ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಚಿತ್ರದ ಕತೆ ಸರಿಯಿಲ್ಲ ಎಂಬ ಅನಿಸಿಕೆಯೂ ವ್ಯಕ್ತವಾಗಿದೆ. ಕೆಲವರಂತೂ ಇದು ಟಾಕ್ಸಿಕ್​ ಅಲ್ಲ ಟಾರ್ಚರ್​ ಎಂದು ಟೀಕಿಸುತ್ತಿದ್ದಾರೆ.
ಇಷ್ಟೆಲ್ಲಾ ವಿವಾದಗಳು ಹಾಗೂ ವಿರೋಧಗಳ ನಡುವೆಯೂ ಯಶ್ ಅವರ 'ಟಾಕ್ಸಿಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆಯುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತದಾದ್ಯಂತ ಭರ್ಜರಿ 101 ಕೋಟಿ ರೂ. ನೆಟ್ ಹಾಗೂ 120 ಕೋಟಿ ರೂ. ಗ್ರಾಸ್ ಗಳಿಕೆ ಮಾಡುವ ಮೂಲಕ ಭರ್ಜರಿ ಓಪನಿಂಗ್​ ಕಂಡಿದೆ. ಆದರೆ, ಎರಡನೇ ದಿನ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net