ಡಿವೋರ್ಸ್​ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ಶುಭಾ ಪೂಂಜಾ! ಏನ್​ ಹೇಳಿದ್ರು ಕರಾವಳಿ ಸುಂದರಿ? Shubha Poonja

ಡಿವೋರ್ಸ್​ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ಶುಭಾ ಪೂಂಜಾ! ಏನ್​ ಹೇಳಿದ್ರು ಕರಾವಳಿ ಸುಂದರಿ? Shubha Poonja
ಡಿವೋರ್ಸ್​ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ಶುಭಾ ಪೂಂಜಾ! ಏನ್​ ಹೇಳಿದ್ರು ಕರಾವಳಿ ಸುಂದರಿ? Shubha Poonja
Published on

ಪ್ರಮುಖ ಮುಖ್ಯಾಂಶಗಳು

  • ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ಕರಾವಳಿ ಸುಂದರಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು ವದಂತಿ
  • ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿಯೇ ದಂಪತಿ ಪರಸ್ಪರ ದೂರಾಗಲು ನಿರ್ಧರಿಸಿದ್ದಾರೆಂಬ ಮಾಹಿತಿ
  • ಪರಸ್ಪರ ಒಪ್ಪಿಗೆಯ ಮೇರೆಗೆ ಶುಭಾ ಮತ್ತು ಸುಮಂತ್​ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಗಾಸಿಪ್ ಹರಡುತ್ತಿದೆ
  • ಕೊನೆಗೂ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಡಿವೋರ್ಸ್​ ವದಮತಿಗೆ ಪ್ರತಿಕ್ರಿಯೆ ನೀಡಿದ ಶುಭಾ ಪೂಂಜಾ
ಬೆಂಗಳೂರು: ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಹಾಗೂ ಗಂಡನಿಂದ ಡಿವೋರ್ಸ್​ ಪಡೆಯಲು ಕೋರ್ಟ್​ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ಕರಾವಳಿ ಸುಂದರಿ ಶುಭಾ ಪೂಂಜಾ ( Shubha Poonja ) ಅವರು ಇನ್​ಸ್ಟಾಗ್ರಾಂ ಸ್ಟೋರಿಯ ಮೂಲಕ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಎಲ್ಲ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು. ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ ನನ್ನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೀರಿ. ಇದೀಗ ನಾನು ಕೇಳಿಕೊಳ್ಳುವುದು ಇಷ್ಟೇ, ಸಮಯ ಬಂದಾಗ ನನ್ನ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ನಾನೇ ನಿಮಗೆ ಖುದ್ದಾಗಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನಗೂ ಹಾಗೂ ಸುಮಂತ್ ಅವರಿಗೂ ಸ್ವಲ್ಪ ಸಮಯಾವಕಾಶ ಕೊಡಿ ಅಂತ ಮನವಿ ಮಾಡುತ್ತೇನೆ ಎಂದು ಶುಭಾ ಪೂಂಜಾ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯನ್ನು ಪೋಸ್ಟ್​ ಮಾಡಿದ್ದಾರೆ.
ಅಂದಹಾಗೆ. ಶುಭಾ ಪೂಂಜಾ ಅವರ ವೈಯಕ್ತಿಕ ಜೀವನದ ಕುರಿತು ಗಾಂಧಿನಗರದ ಗಲ್ಲಿಗಳಲ್ಲಿ ಕೆಲ ದಿನಗಳಿಂದ ಡಿವೋರ್ಸ್​ ಗಾಸಿಪ್‌ ಹರಿದಾಡುತ್ತಿದೆ. ಸದಾ ಲವಲವಿಕೆಯಿಂದ ಇರುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ.
ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿಯೇ ದಂಪತಿ ಪರಸ್ಪರ ದೂರಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಶುಭಾ ಪೂಂಜಾ ಅವರು ತಮ್ಮ ಪತಿಯಿಂದ ಅಧಿಕೃತವಾಗಿ ವಿಚ್ಛೇದನ (ಡೈವೋರ್ಸ್) ಪಡೆಯುವ ಸಲುವಾಗಿ ಈಗಾಗಲೇ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಗಾಸಿಪ್ ಹರಡುತ್ತಿದೆ.
ಕಳೆದ 2022ರ ಜನವರಿ ತಿಂಗಳಲ್ಲಿ ಉದ್ಯಮಿ ಸುಮಂತ್ ಬಿಲ್ಲವ ಅವರೊಂದಿಗೆ ಶುಭಾ ಪೂಂಜಾ ಹಸೆಮಣೆ ಏರಿದ್ದರು. ಅತ್ಯಂತ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಇವರ ವಿವಾಹ ಮಹೋತ್ಸವ ನೆರವೇರಿತ್ತು. ಮದುವೆಯಾದ ಹೊಸತರಲ್ಲಿ ಈ ಜೋಡಿ ಅತ್ಯಂತ ಪ್ರೀತಿಯಿಂದ ಇರುತ್ತಾ, ಕಿರುತೆರೆಯ ಕೆಲವು ಜನಪ್ರಿಯ ರಿಯಾಲಿಟಿ ಶೋಗಳಲ್ಲೂ ಜೊತೆಯಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿತ್ತು. ಆದರೆ, ಈಗ ಹಠಾತ್ತನೆ ಇವರಿಬ್ಬರ ಮಧ್ಯೆ ಮುನಿಸು ಉಂಟಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಕಡೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನಟಿ ಶುಭಾ ಪೂಂಜಾ ಅವರಾಗಲಿ ಅಥವಾ ಅವರ ಪತಿ ಸುಮಂತ್ ಆಗಲಿ ಈವೆರೆಗೂ ಮಾತನಾಡಿರಲಿಲ್ಲ. ಇದೀಗ ಇನ್​ಸ್ಟಾಗ್ರಾಂ ಸ್ಟೋರಿ ಪೋಸ್ಟ್​ ಮಾಡುವ ಮೂಲಕ ಶುಭಾ ಪೂಂಜಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಕನ್ನಡದ ಸೂಪರ್ ಹಿಟ್ ಚಿತ್ರಗಳಾದ 'ಮೊಗ್ಗಿನ ಮನಸ್ಸು', 'ಜಾಕ್‌ಪಾಟ್', 'ಚಂಡ', 'ಸ್ಲಮ್ ಬಾಲಾ' ಸೇರಿದಂತೆ ಹಲವು ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ಶುಭಾ ಪೂಂಜಾ, 'ಬಿಗ್ ಬಾಸ್ ಕನ್ನಡ ಸೀಸನ್ 8'ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಮುಗ್ಧತೆಯಿಂದ ಮನೆಮಾತಾಗಿದ್ದರು. ಸದ್ಯ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಬಿಜಿಯಾಗಿರುವ ನಟಿಯ ವೈಯಕ್ತಿಕ ಜೀವನದ ಬಗ್ಗೆ ಕೇಳಿಬರುತ್ತಿರುವ ಈ ಬೇಸರದ ಸುದ್ದಿ ಕೇವಲ ವದಂತಿಯಾಗಿಯೇ ಉಳಿಯಲಿ, ದಂಪತಿ ಒಂದಾಗಲಿ ಎಂಬುದೇ ಸಿನಿಕುಲದ ಆಶಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net