

ಬೆಂಗಳೂರು: ಇತ್ತೀಚೆಗಷ್ಟೇ ಬಾಲಿವುಡ್ನಲ್ಲಿ ಫ್ಯಾಮಿಲಿ ಹೆಸರಿನ ಕಿರುಚಿತ್ರ ಬಿಡುಗಡೆ ಆಗಿತ್ತು. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ ಎಂಬುದು ಆ ಕಿರುಚಿತ್ರದ ಉದ್ದೇಶವಾಗಿತ್ತು. ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ಶಿವರಾಜ್ಕುಮಾರ್, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್ ಸೇರಿ ಹಲವರು ಕಾಣಿಸಿಕೊಂಡಿದ್ದರು. ಯೂಟ್ಯೂಬ್ನಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ರೀತಿ ಇದೀಗ ಕನ್ನಡದಲ್ಲೂ ನಗುತಲಿರು ಎಂಬ ಹಾಡು ಮೂಡಿಬಂದಿದೆ. ಬಹುತೇಕ ಕನ್ನಡದ ಎಲ್ಲ ಸಿನಿಮಾ ಸ್ಟಾರ್ಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಆ ಹಾಡಿನ ಕೆಲ ಸಾಲುಗಳು ಇಲ್ಲಿವೆ..
ನೀನೇ ತಾಯಿ, ನೀನೇ ತಂದೆ..
ಭೂಮಿತಾಯಿ ಎಲ್ಲ ನಿಂದೆ..
ತಿದ್ದಿ ನಡೆವ ದಾರಿ ತೋರೆ..
ಹಸಿದ ಕಂಗಳನು ನೋವು, ಅಳಿಸುವ ಒಂದಾಗಿ ನಾವು..
ಚೂರು ಪ್ರೀತಿ ಹಂಚಲೇನು ಚಿಂತೆ….
ಪನ್ನಗಾ ಭರಣ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ನಗುತಲಿರು ಹಾಡಿನಲ್ಲಿ ಪುನೀತ್ ರಾಜ್ಕುಮಾರ್, ರಮೇಶ್ ಅರವಿಂದ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ಶಾನ್ವಿ, ಚಿರು ಸರ್ಜಾ, ಮೇಘನಾ ರಾಜ್, ಪ್ರಜ್ವಲ್, ಧನಂಜಯ್ ಶ್ರದ್ಧಾ ಶ್ರೀನಾಥ್, ಪ್ರಣೀತಾ ಸುಭಾಷ್, ನಿಶ್ವಿಕಾ ನಾಯ್ಡು ಸೇರಿ ಹತ್ತಾರು ಕಲಾವಿದರು ಕಾಣಿಸಿಕೊಂಡಿದ್ದಾರೆ.
ಮನೆಯಲ್ಲಿದ್ದುಕೊಂಡೆ ಈ ವಿಡಿಯೋ ಮಾಡಿದ್ದು, ಅದರ ಸಂಯೋಜನೆಯನ್ನು ರವಿ ಆರಾಧ್ಯ ಮಾಡಿದ್ದಾರೆ. ಹಾಡಿಗೆ ಡಿ, ಸತ್ಯ ಪ್ರಕಾಶ್ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್ ಸಂಗೀತದ ಜತೆಗೆ ಧ್ವನಿಯನ್ನೂ ನೀಡಿದ್ದಾರೆ. ನೋಬಿನ್ ಪೌಲ್ ಕಂಪೋಸಿಂಗ್ನಲ್ಲಿ ಕೆಲಸ ಮಾಡಿದ್ದಾರೆ.