ಚಂದನವನದಲ್ಲಿ ನವಯುಗ; ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ...

Ullasa lead
Published on

ಹೊಸ ವರ್ಷ ಪ್ರಾರಂಭವಾಗಿ ಇಷ್ಟು ದಿನಗಳಲ್ಲಿ ಒಂದಿಷ್ಟು ವಿಷಯಗಳು ಚಿತ್ರರಂಗದ, ಚಿತ್ರರಂಗದವರ ಮತ್ತು ಪ್ರೇಕ್ಷಕರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿವೆ.

ಬೆಂಗಳೂರು: ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಶುಭವಾಗಲಿದೆ ಎಂದು 2020ರ ಆರಂಭದಲ್ಲಿ ಬಹಳಷ್ಟು ಜನ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದ ಆಗಿದ್ದೇ ಬೇರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ವರ್ಷ ಸಾವು, ನೋವು, ನಷ್ಟ, ನಿರುದ್ಯೋಗದ ಬಗ್ಗೆ ಹೆಚ್ಚು ಚರ್ಚೆಯಾಯಿತೇ ಹೊರತು, ಪಾಸಿಟಿವ್ ಎನ್ನುವಂತಹ ವಿಷಯಗಳೇ ಕೇಳಿಬರಲಿಲ್ಲ. ಈಗ ಹೊಸ ವರ್ಷ ಪ್ರಾರಂಭವಾಗಿ ಇಷ್ಟು ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಒಂದು ಸಂಚಲನ ಮೂಡಿದೆ. ಒಂದಿಷ್ಟು ವಿಷಯಗಳು ಚಿತ್ರರಂಗದ, ಚಿತ್ರರಂಗದವರ ಮತ್ತು ಪ್ರೇಕ್ಷಕರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿವೆ.

ಪ್ರಮುಖವಾಗಿ ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರದ ಟೀಸರ್, ಬಿಡುಗಡೆಯಾದ ಕೆಲವೇ ದಿನಗಳಲ್ಲಿ 15 ಕೋಟಿಗೂ ಅಧಿಕ ವೀಕ್ಷಣೆ ಪಡೆದು ವಿಶ್ವದಲ್ಲಿಯೇ ಅತೀ ಹೆಚ್ಚು ವೀಕ್ಷಣೆಗೊಳಗಾದ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜತೆಗೆ, ಹಿಂದಿನ ಎಲ್ಲ ದಾಖಲೆಗಳನ್ನು ಪುಡಿ ಮಾಡಿದೆ. ಕನ್ನಡಿಗರು ಸೇರಿ ಮಾಡಿದ ಚಿತ್ರವೊಂದು ಇಂಥದ್ದೊಂದು ದಾಖಲೆ ಮಾಡಿದ್ದು ನಿಜಕ್ಕೂ ವಿಶೇಷ. ಈ ಕುರಿತು ರಾಮ್ೋಪಾಲ್ ವರ್ವ ಪ್ರತಿಕ್ರಿಯಿಸಿದ್ದು, ‘‘ಬಾಹುಬಲಿ 2’ ಚಿತ್ರದ ಟ್ರೇಲರ್ 11 ಕೋಟಿ ವೀಕ್ಷಣೆ ಸಿಗುವುದಕ್ಕೆ ಮೂರು ವರ್ಷ ಬೇಕಾದವು. ‘ಕೆಜಿಎಫ್ 2’ ಚಿತ್ರದ ಟೀಸರ್ ಕೇವಲ ಮೂರು ದಿನಗಳಲ್ಲಿ ಆ ದಾಖಲೆಯನ್ನು ಮುರಿದು 14 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಇದರಿಂದ ಬೇರೆ ಚಿತ್ರರಂಗಗಳ ಹೊಟ್ಟೆ ಉರಿಯುತ್ತಿರಬೇಕು’ ಎಂದು ಹೇಳಿಕೊಂಡಿದ್ದಾರೆ.

ಅದರ ಹಿಂದೆಯೇ, ಪ್ರಭಾಸ್ ನಾಯಕತ್ವದ ‘ಸಲಾರ್’ ಎಂಬ ಪ್ಯಾನ್ ಇಂಡಿಯಾದ ಚಿತ್ರವೂ ಸೆಟ್ಟೇರಿದೆ. ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ನೂರಕ್ಕೂ ಹೆಚ್ಚು ಕೋಟಿ ಬಜೆಟ್​ನಲ್ಲಿ ಈ ಚಿತ್ರವನ್ನು ನಿರ್ವಿುಸುತ್ತಿದ್ದು, ಕನ್ನಡಿಗರೊಬ್ಬರು ನಿರ್ವಿುಸುತ್ತಿರುವ ಅತ್ಯಂತ ದುಬಾರಿ ಚಿತ್ರ ಇದಾಗಿದೆ. ಇಡೀ ದೇಶವೇ ಈ ಚಿತ್ರದ ಮೇಲೊಂದು ಕಣ್ಣಿಟ್ಟಿದೆ.

ಇನ್ನು, ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿದ್ದರೂ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಮತ್ತು ದೀಪ ಹಚ್ಚುವ ಮೂಲಕ ಕಾರ್ಯಕಮವನ್ನು ಉದ್ಘಾಟಿಸುವ ಅವಕಾಶ ಕನ್ನಡದ ಯಾರಿಗೂ ಸಿಕ್ಕಿರಲಿಲ್ಲ. ಈ ಬಾರಿ ಅಂಥದ್ದೊಂದು ಅವಕಾಶ ಸುದೀಪ್ ಅವರಿಗೆ ಸಿಕ್ಕಿದ್ದು, ಕನ್ನಡದ ಮಟ್ಟಿಗಿದು ಹೆಮ್ಮೆಯ ಸಂಗತಿ. ಇದಲ್ಲದೇ ಕನ್ನಡದ ಮೊದಲ ಚಿತ್ರವಾಗಿ ವಿಕ್ರಾಂತ್ ರೋಣ ಟೈಟಲ್ ಬುರ್ಜ್ ಖಲೀಫಾ ಮೇಲೆ ಅನಾವರಣವಾಗಲಿದೆ. ಇವೆಲ್ಲದರ ಜತೆಗೆ ಕನ್ನಡ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪರಭಾಷೆಗಳಿಗೆ ಡಬ್ ಆಗುತ್ತಿವೆ. ‘ಕಬ್ಜ’, ‘ಪೊಗರು’, ‘ಮದಗಜ’, ‘ವಿಕ್ರಾಂತ್ ರೋಣ’, ‘ರಾಬರ್ಟ್’, ‘ಯುವರತ್ನ’, ‘ಏಕ್ ಲವ್ ಯಾ’ ಸೇರಿದಂತೆ ಹಲವು ಚಿತ್ರಗಳು ಕನ್ನಡವಲ್ಲದೆ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net