ಆಭರಣಗಳ ಅಕ್ಷಯ: ಒಡವೆಗಳ ಮೇಲಿನ ಸ್ಯಾಂಡಲ್‌ವುಡ್ ನಟಿಯರ ಒಲವು

akshay 1
Published on

ಇಂದು ಅಕ್ಷಯ ತೃತೀಯ ಆಚರಣೆಯ ಸಂಭ್ರಮ. ಆಭರಣಗಳ ಖರೀದಿಗೆ ಇಂದು ಒಳ್ಳೆಯ ದಿನ ಎಂಬ ನಂಬಿಕೆಯಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಅಕ್ಷಯ ತೃತೀಯ ಆಚರಣೆಯ ಹಾಗೂ ಒಡವೆಗಳ ಮೇಲಿನ ಒಲವಿನ ಬಗ್ಗೆ ಸ್ಯಾಂಡಲ್‌ವುಡ್ ನಟಿಯರಾದ ನಿವಿಷ್ಕಾ ಪಾಟೀಲ್, ಅಖಿಲಾ ಪ್ರಕಾಶ್ ಹಾಗೂ ಪ್ರಕೃತಿ ಸೌಂದರ್ಯ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

ಚಿನ್ನದ ಮೇಲಿನ ಹೂಡಿಕೆ ಒಳ್ಳೆಯದು

ನಿವಿಷ್ಕಾ ಪಾಟೀಲ್, ನಟಿ

ಪ್ರತಿ ಅಕ್ಷಯಾ ತೃತೀಯ ಸಮಯದಲ್ಲೂ ಅಮ್ಮ ಕನಿಷ್ಠ 5 ಗ್ರಾಂ ಚಿನ್ನವಾದರೂ ಖರೀದಿಸುತ್ತಾರೆ. ಅವರು ಮೊದಲಿನಿಂದಲೂ ಹಾಗೇ ನಂಬಿಕೊಂಡು ಬಂದಿದ್ದಾರೆ. ಸದ್ಯದಲ್ಲೇ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ನಿರ್ದೇಶಕ ಅಭಿ ಮದುವೆಯಿದೆ. ನಾನೂ ಅವರ ಮದುವೆಗೆ ತೆರಳುವ ಕಾರಣ ಒಡವೆ ಖರೀದಿಸಬೇಕು ಅಂತ ಅಂದುಕೊಂಡಿದ್ದೇನೆ. ಈಗಾಗಲೇ ಪ್ಲಾನಿಂಗ್ ಮಾಡಿದ್ದೇನೆ. ಈ ಹಿಂದೆ ಹಲವು ಆಭರಣ ಮಳಿಗೆಗಳಿಗೆ ಪ್ರಚಾರ ಮಾಡುತ್ತಿದ್ದೆ. ಆಗ ನನಗೆ ಆಭರಣಗಳ ಮೇಲಿನ ಒಲವು ಹೆಚ್ಚಾಯಿತು. ಆಭರಣಗಳನ್ನು ಧರಿಸುವುದರಿಂದ ನಾವು ಚೆನ್ನಾಗಿ ಕಾಣುತ್ತೇವೆ. ನನ್ನ ಪ್ರಕಾರ, ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳ್ಳೆಯದು. ಭವಿಷ್ಯದಲ್ಲಿ ನಮಗೆ ಅನುಕೂಲವಾಗುತ್ತದೆ. ಚಿನ್ನದ ಬೆಲೆ ಕಾಲದಿಂದ ಕಾಲಕ್ಕೆ ಹೆಚ್ಚಾಗುವುದರಿಂದ ನಾವು ಇಂದು ಖರೀದಿಸಿದರೆ, ಅದು ಮುಂದೆ ನಮಗೆ ಸಹಾಯವಾಗುತ್ತದೆ. ಜುವೆಲ್ಸ್ ಆರ್ ಮೇಡ್ ಾರ್ ದ ಗರ್ಲ್ಸ್ ಹಾಗಾಗಿ, ಒಳ್ಳೆಯ ಸೀರೆಗೆ ಅದಕ್ಕೆ ಒಪ್ಪುವ ಆಭರಣ ಧರಿಸಿದರೆ ನಮ್ಮ ಕಳೆ, ವೈಭವ ಇನ್ನಷ್ಟು ಹೆಚ್ಚುತ್ತದೆ. ನನಗೆ ಝುಮ್ಕಿ ಎಂದರೆ ತುಂಬಾ ಇಷ್ಟ.

ಸೌಂದರ್ಯದ ಪ್ರತೀಕ

ಅಖಿಲಾ ಪ್ರಕಾಶ್, ನಟಿ

ಆಭರಣಗಳ ಮೇಲೆ ನನಗೆ ದೊಡ್ಡ ಕ್ರೇಜ್ ಇಲ್ಲವಾದರೂ ಸರಳವಾಗಿ ಇರಲು ಇಷ್ಟ ಪಡುತ್ತೇನೆ. ಆಭರಣಗಳೆಂದರೆ ಹೆಣ್ಣು ಮಕ್ಕಳ ಸೌಂದರ್ಯದ ಪ್ರತೀಕ. ಹಾಗೆಯೇ ಚಂದದ ಒಡವೆ ಧರಿಸಿದರೆ ಹೆಣ್ಣುಮಕ್ಕಳು ತುಂಬಾ ಲಕ್ಷಣವಾಗಿ ಕಾಣುತ್ತಾರೆ. ಇನ್ನು ಅಕ್ಷಯ ತೃತೀಯ ಸಮಯದಲ್ಲಿಯೇ ನನ್ನ ಹುಟ್ಟುಹಬ್ಬವಿರುವ ಕಾರಣ ಮೊದಲಿನಿಂದಲೂ ಅಪ್ಪ-ಅಮ್ಮ ನನಗೆ ಆಭರಣದ ಗ್‌ಟಿ ಮಾಡುತ್ತಿದ್ದರು. ಇದು ನನಗೆ ವಿಶೇಷ ಅನಿಸುತ್ತಿತ್ತು. ಈಗ ನನ್ನ ಪತಿ ಕೂಡ ವಿಶೇಷ ಸಂದರ್ಭಗಳಲ್ಲಿ ಒಡವೆಗಳನ್ನೇ ಉಡುಗೊರೆಯನ್ನಾಗಿ ನೀಡುವುದು ಹೆಚ್ಚು. ಇನ್ನು ಅಕ್ಷಯ ತೃತೀಯ ದಿನದಂದು ಆಭರಣಗಳನ್ನು ಖರೀದಿಸುವುದರಿಂದ ಮನೆಗೆ ಲಕ್ಷ್ಮೀ ಆಗಮನವಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ, ಅಂದು ಆಭರಣವನ್ನು ಖರೀದಿ ಮಾಡುತ್ತಾರೆ. ನನಗೆ ಝುಮ್ಕಿ ಹಾಗೂ ಹಳೆಯ ಕಾಲದ ಮಾವಿನ ವಿನ್ಯಾಸದಲ್ಲಿ ಮೂಡಿಬರುತ್ತಿದ್ದ ಆಭರಣಗಳು ಎಂದರೆ ತುಂಬಾ ಇಷ್ಟ. ನಾನು ಕೂಡ ಅದೇ ಮಾದರಿ ಆಭರಣಗಳನ್ನು ಖರೀದಿಸಲು ಆಸಕ್ತಿ ವಹಿಸುತ್ತೇನೆ.

ಅಮ್ಮ ನೀಡಿದ ಚಿನ್ನದ ಉಡುಗೊರೆ

ಪ್ರಕೃತಿ ಸೌಂದರ್ಯ, ನಟಿ

ನಮ್ಮ ಸಂಸ್ಕೃತಿ, ಸಂಪ್ರದಾಯ ವಿಶೇಷವಾದುದು. ಯಾವುದೇ ಆಚರಣೆಯಾಗಿರಲಿ ಅದಕ್ಕೊಂದು ಬಲವಾದ ನಂಬಿಕೆ ಇರುತ್ತದೆ. ಹೀಗಿರುವಾಗ ಆಭರಣ ಖರೀದಿಸಲು ಕೂಡ ಒಂದು ದಿನ ಇದೆ ಅಂದರೆ, ಆ ದಿನ ತುಂಬಾ ಪವಿತ್ರವಾದುದು ಎಂಬುದು ನನ್ನ ನಂಬಿಕೆ. ಪ್ರತಿಯೊಬ್ಬ ಹೆಣ್ಣುಮಕ್ಕಳೂ ಆಭರಣಗಳನ್ನು ಇಷ್ಟಪಡುತ್ತಾರೆ. ಹಾಗೆಯೇ ನನಗೂ ತುಂಬಾ ಇಷ್ಟ, ಒಡವೆ ನಮ್ಮ ಸೌಂದರ್ಯವನ್ನು ಮತ್ತಷ್ಟು ವೃದ್ಧಿಸುತ್ತದೆ ಎಂದರೆ ತಪ್ಪಾಗಲಾರದು. ಯಾವುದೇ ಶುಭ ಸಮಾರಂಭವಿರಲಿ, ನೆಚ್ಚಿನ ಸೀರೆಯ ಮೇಲೆ ಆಭರಣಗಳನ್ನು ಧರಿಸುವುದು ಕಡ್ಡಾಯ. ನನಗೆ ಆಭರಣಗಳ ಮೇಲೆ ಪ್ರೀತಿ ಹುಟ್ಟಿದ್ದು ಅಮ್ಮನಿಂದ. ನನ್ನ ಪ್ರತಿ ಬರ್ತ್‌ಡೇಗೂ ಅಮ್ಮ ಚಿನ್ನದ ಉಡುಗೊರೆ ನೀಡುತ್ತಾರೆ. ಈ ಸಂಪ್ರದಾಯವನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದಾರೆ. ಈ ಬಾರಿಯ ಅಕ್ಷಯ ತೃತೀಯಕ್ಕೂ ಆಭರಣ ಖರೀದಿಸುವ ಯೋಚನೆಯಿದೆ. ಸಣ್ಣದು, ದೊಡ್ಡದು ಅಂತೇನಿಲ್ಲ. ಅಂದು ಒಂದು ಆಭರಣ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಗಾಗಿ ಅಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net