ಬೆಂಗಳೂರು: ಸ್ಯಾಂಡಲ್ವುಡ್ ಮುದ್ದು ಬೆಡಗಿ ನಟಿ ಅಮೂಲ್ಯಾ ಅವರು ಮಾರ್ಚ್ 2 ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಅವರ ಕುಟುಂಬದವರು, ಸ್ನೇಹಿತರು, ಆಪ್ತರು, ಅಭಿಮಾನಿಗಳು ಖುಷಿಪಟ್ಟರು. ಅಂದಹಾಗೆ, ಈ ಸಂತಸದ ಸುದ್ದಿಯನ್ನು ನಟಿ ಅಮೂಲ್ಯಾ ಪತಿ ಜಗದೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಇನ್ನು, ಆಸ್ಪತ್ರೆಯಿಂದ ಒಂದು ದಿನ ಹೊರಗೆ ಬಂದ ಜಗದೀಶ್ ಅವರಿಗೆ ಅಚ್ಚರಿ ಒಂದು ಕಾದಿತ್ತಂತೆ. ಹೌದು, ರಸ್ತೆ ಬದಿಯಲ್ಲಿ ಬಲೂನ್ ಮಾರುವ ವ್ಯಕ್ತಿ ರವಿ ಜಗದೀಶ್ ಅವರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲ, ಅಮೂಲ್ಯಾ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ ಜಗದೀಶ್ ಅವರ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ''ಸುಸಜ್ಜಿತ ಶಾಪ್‌ಗೂ, ಫುಟ್‌ಪಾತ್‌ನಲ್ಲಿ ಮಾರುವ ಪುಟ್ಟ ಅಂಗಡಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಮನಸ್ಸಿಗೆ ಅನ್ನಿಸಿತು. ಕೆಲವೊಮ್ಮೆ, ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ಶಾಪ್‌ನಲ್ಲಿ ಹೃದಯ ಶ್ರೀಮಂತಿಕೆಯೇ ಬಹಳ ಕಡಿಮೆ ಎಂದೆನಿಸಬಹುದು. ಆದರೆ, ಕಡಿಮೆ ಬೆಲೆ ಕೊಟ್ಟು ಸಣ್ಣ ಅಂಗಡಿ ಅಥವಾ ಫುಟ್‌ಪಾತ್‌ನಲ್ಲಿ ಏನನ್ನಾದರೂ ತೆಗೆದುಕೊಂಡರೆ ಅವರಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸ ನಮಗೆ ತಿಳಿಯುತ್ತೆ'', ಎಂದಿದ್ದಾರೆ ಜಗದೀಶ್.