

ಬೆಂಗಳೂರು: ಸಂಚಾರಿ ವಿಜಯ್ ಚಿತ್ರಗಳ ಬಗ್ಗೆ, ಅವರ ಅಭಿನಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ವಿಜಯ್ ಎಂಬ ಸಾಮಾನ್ಯ ಯುವಕ ಸಂಚಾರಿ ವಿಜಯ್ ಆಗಿದ್ದು ಹೇಗೆ? ಮತ್ತು ಅವರಿಗೆ ರಂಗಭೂಮಿ ಹಾಗೂ ನಟನೆಯ ಗೀಳು ಹತ್ತಿದ್ದು ಹೇಗೆ ಎಂಬ ಪ್ರಶ್ನೆ ಬರುವುದು ಸಹಜವೇ.
ವಿಜಯ್ ಅವರ ಮೂಲ ಇರುವುದು ಕಡೂರು ತಾಲೂಕಿನ ಪಂಚನಳ್ಳಿಯಲ್ಲಿ. ಅಪ್ಪ ವಿಲೇಜ್ ಅಕೌಂಟೆಂಟ್ ಆಗಿ, ಅಮ್ಮ ದಾದಿಯಾಗಿ ಕೆಲಸ ಮಾಡುತ್ತಿದ್ದರಂತೆ. ವಿಜಯ್‌ಗೆ ನಟನೆ, ಸಂಗೀತದತ್ತ ಒಲವು ಮೂಡಲು ಕಾರಣ ಅವರ ತಂದೆ. ಬಹುಮುಖ ಪ್ರತಿಭೆಯಾಗಿದ್ದ ತಂದೆ, ನಟನೆ ಜತೆಗೆ ಕೆಲವು ಸಂಗೀತೋಪಕರಣಗಳನ್ನೂ ನುಡಿಸುತ್ತಿದ್ದರಂತೆ. ಇನ್ನು ಅವರಮ್ಮ ಹಾಡುಗಾರ್ತಿಯಾಗಿದ್ದರಂತೆ. ಅಪ್ಪ ಇನ್‌ಸ್ಟ್ರುಮೆಂಟ್ ನುಡಿಸುತ್ತಿದ್ದರೆ ಅಮ್ಮ ಹಾಡುತ್ತಿದ್ದರು. ಸಂಚಾರಿ ವಿಜಯ್‌ಗೆ ಮೊದಲ ಪಾಠ ಸಿಕ್ಕಿದ್ದು ಅವರಿಂದಲೇ.
ಅದೊಮ್ಮೆ ವಿಜಯ್ ಅವರ ಊರನಲ್ಲಿ ಒಂದು ನಾಟಕವಿತ್ತಂತೆ. ಅದರಲ್ಲಿ ಬಾಲನಟನಾಗಿ ಕಾಣಿಸಿಕೊಂಡ ವಿಜಯ್, ಅಲ್ಲೇ ಮೊದಲ ಬಾರಿಗೆ ಎಲ್ಲರ ಗಮನಸೆಳೆದಿದ್ದರಂತೆ. ನಾಟಕದಲ್ಲಿ ವಿಜಯ್ ಅವರ ಪಾತ್ರ ಮಾಡುತ್ತಿದ್ದ ತೀರಿಕೊಳ್ಳುತ್ತದೆ. ಉಳಿದವರೆಲ್ಲಾ ಸೇರಿಕೊಂಡು ಅವನನ್ನು ಹೊತ್ತುಕೊಂಡು ಹೋಗಬೇಕು. ಹಾಗೆ ಹೋಗುತ್ತಿದ್ದಾಗ ಅರ್ಧದಲ್ಲೇ ವಿಜಯ್ ಮೇಲೆ ಏನೋ ಬಿದ್ದಂತಾಗಿದೆ. ಅದೇನು ಅಂತ ನೋಡಿದರೆ, ಅವರ ಅಭಿನಯ ಮೆಚ್ಚಿಕೊಂಡ ಜನ ಕಾಸು ಎಸೆಯುತ್ತಿದ್ದರಂತೆ. ವಿಜಯ್ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡಿಬಿಡುತ್ತಾನೆ ಅಂತ ಊರವರೆಲ್ಲ ಮಾತಾಡಿಕೊಂಡರಂತೆ.