

ಬೆಂಗಳೂರು: ಅನೀಶ್ ತೇಜೇಶ್ವರ್ ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡು, ಹೊಸ ಸಿನಿಮಾ ಘೋಷಿಸಿದ್ದಾರೆ. ಆ ಚಿತ್ರದ ಹೆಸರು ‘ಬೆಂಕಿ’. ಶೀರ್ಷಿಕೆಗೆ ತಕ್ಕಂತೆ ಫಸ್ಟ್ಲುಕ್ನಲ್ಲಿ ಒಂದಷ್ಟು ರಗಡ್ ಆಗಿಯೇ ಅನೀಶ್ ಕಾಣಿಸಿಕೊಂಡಿದ್ದಾರೆ. ಕಮರ್ಷಿಯಲ್ ಅಂಶಗಳನ್ನು ಆಧರಿಸಿ ಅದಕ್ಕೆ ಅಣ್ಣ-ತಂಗಿ ಬಾಂಧವ್ಯವನ್ನು ಬೆರೆಸಿ ಚಿತ್ರ ನಿರ್ದೇಶಿಸುತ್ತಿದ್ದಾರೆ ನಿರ್ದೇಶಕ ಶಾನ್. ಅಂದಹಾಗೆ, ಅನೀಶ್ ನಟನೆಯ 10ನೇ ಚಿತ್ರವಿದು. ನಿರ್ಮಾಣದ ವಿಚಾರಕ್ಕೆ ಬಂದರೆ ಮೂರನೇ ಸಿನಿಮಾ.
‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಮತ್ತು ‘ರಾಮಾರ್ಜುನ’ ಬಳಿಕ ‘ಬೆಂಕಿ’ಗೂ ಅನೀಶ್ ನಿರ್ವಪಕ. ಹೊಸ ಸಿನಿಮಾದಲ್ಲಿ ಟೈಟಲ್ ಪಾತ್ರವನ್ನೇ ಅವರು ನಿಭಾಯಿಸುತ್ತಿದ್ದಾರೆ. ಅವರಿಗಿಲ್ಲಿ ಕಿರುತೆರೆ ನಟಿ ಸಂಪದ ಹುಲಿವಾನ ನಾಯಕಿ. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ರೈಡರ್’ ಚಿತ್ರದಲ್ಲಿಯೂ ಸಂಪದ ನಟಿಸಿದ್ದರು. ಹಳ್ಳಿಗಾಡಿನ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿಯೂ ಸಾಗಲಿದೆಯಂತೆ. ಈಗಾಗಲೇ ಶೇ. 70 ಭಾಗದ ಶೂಟಿಂಗ್ ಸಹ ಮುಗಿದಿದ್ದು, ಶೀಘ್ರದಲ್ಲಿ ಟೀಸರ್ ಮೂಲಕ ಚಿತ್ರದಲ್ಲೇನಿರಲಿದೆ ಎಂಬ ಬಗ್ಗೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಡಲಿದೆ.
ಚಿತ್ರದಲ್ಲಿ ಶ್ರುತಿ ಪಾಟೀಲ್ ಪ್ರಮುಖ ಪಾತ್ರವೊಂದರಲ್ಲಿದ್ದಾರೆ. ಕೌಶಿಕ್ ಹರ್ಷ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾ ಹೊರತುಪಡಿಸಿದರೆ, ‘ಮಾಂಜಾ’ ಮತ್ತು, ‘ಎನ್ಆರ್ಐ’ ಸಿನಿಮಾಗಳ ಕೆಲಸದಲ್ಲಿಯೂ ಅನೀಶ್ ಬಿಜಿಯಾಗಿದ್ದಾರೆ.