

ಕಾಸ್ಟಿಂಗ್ ಕೌಚ್ ಸಿನಿಮಾ ಇಂಡಸ್ಟ್ರಿಯ ದೊಡ್ಡ ಪಿಡುಗು. ಈಗಷ್ಟೇ ಬಾಲಿವುಡ್ ನಟಿ ಡಿಂಪಲ್ ಕೌರ್, ನಿರ್ಮಾಪಕ ಸಾಜಿದ್ ಖಾನ್ ಮೇಲೆ ಗಂಭೀರ ಆರೋಪ ಹೊರಿಸಿದ್ದರು. ಅಂಥದ್ದೆ ಮತ್ತೊಂದು ಘಟನೆಯನ್ನು ಬಹುಭಾಷಾ ನಟಿ ಸಮೀರಾ ರೆಡ್ಡಿ ನೆನಪು ಮಾಡಿಕೊಂಡಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ನಡೆದ ಎರಡು ಘಟನೆಗಳನ್ನು ಮೆಲುಕು ಹಾಕಿರುವ ಸಮೀರಾ, ಈಗಲೂ ಆ ಘಟನೆಗಳನ್ನು ನೆನಪು ಮಾಡಿಕೊಂಡರೆ, ಕೋಪ ನೆತ್ತಿಗೇರುತ್ತದೆಯಂತೆ. ಹಾಗಾದರೆ, ಏನದು ಘಟನೆ? ಅದನ್ನು ಸ್ವತಃ ಸಮೀರಾ ಹೇಳಿಕೊಂಡಿದ್ದಾರೆ.
‘ಅದು ಬಾಲಿವುಡ್ ಸಿನಿಮಾ. ಶೂಟಿಂಗ್ ಸಮಯದಲ್ಲಿ ಸ್ಕ್ರಿಪ್ಟ್ನಲ್ಲಿ ಕಿಸ್ಸಿಂಗ್ ದೃಶ್ಯಗಳು ಇರಲಿಲ್ಲ. ನಾಯಕನ ಆದೇಶದ ಹಿನ್ನೆಲೆಯಲ್ಲಿ ನಿರ್ದೇಶಕರು ಕಿಸ್ಸಿಂಗ್ ದೃಶ್ಯವನ್ನು ಸೇರಿಸಿದರು. ನಾನು ಅದಕ್ಕೆ ಒಪ್ಪಿರಲಿಲ್ಲ. ನೀವು ಈ ರೀತಿಯ ದೃಶ್ಯವನ್ನು ಮುಸಾಫಿರ್ ಚಿತ್ರದಲ್ಲಿ ಮಾಡಿದ್ದೀರಿ. ಹಾಗಾಗಿ ಸೇರಿಸಲಾಗಿದೆ. ನೀವು ಮ್ಯಾನೇಜ್ ಮಾಡುತ್ತೀರಿ ಮಾಡಿ ಎಂದು ಹೀರೋ ಕಡೆಯಿಂದಲೇ ಇಂಥ ದೃಶ್ಯದ ಪ್ರಸ್ತಾಪ ಬಂದಿತ್ತು’ ಎನ್ನುತ್ತಾರವರು.
‘ನೀನು ಯಾವುದಕ್ಕೂ ಸಹಕರಿಸುತ್ತಿಲ್ಲ. ನೀನು ತುಂಬ ಬೋರಿಂಗ್, ನೀನು ಶೂಟಿಂಗ್ ಅನ್ನು ಫನ್ ರೀತಿಯಲ್ಲಿ ತೆಗೆದುಕೊಳ್ಳುವುದೇ ಇಲ್ಲ. ನನಗೆ ಗೊತ್ತಿಲ್ಲ, ನಿನ್ನ ಜತೆ ನಾನು ಇನ್ನೊಮ್ಮೆ ಕೆಲಸ ಮಾಡುತ್ತೆನೋ ಇಲ್ಲವೋ ಎಂದು ಆ ಹೀರೋ ಹೇಳಿದ್ದ. ಆದರೆ, ನಾನು ಆತನ ಜತೆ ಬೇರೊಂದು ಸಿನಿಮಾ ಮಾಡಲೇ ಇಲ್ಲ. ಅದೇ ಕೊನೇ ಸಿನಿಮಾ ಎಂದು ಕಹಿ ಘಟನೆಗಳನ್ನು ನೆನೆಯುತ್ತಾರೆ ಸಮೀರಾ ರೆಡ್ಡಿ.
ಅಂದಹಾಗೆ, ಬಾಲಿವುಡ್, ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಸಮೀರಾ, ಕನ್ನಡದಲ್ಲಿ ಕಿಚ್ಚ ಸುದೀಪ್ ಜತೆ ವರದ ನಾಯಕ ಸಿನಿಮಾದಲ್ಲಿ ನಟಿಸಿ ಚಂದನವನಕ್ಕೆ ಆಗಮಿಸಿದ್ದರು. (ಏಜೆನ್ಸೀಸ್)