

Samantha : ಟಾಲಿವುಡ್ ಹೀರೋ ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಲ ಅವರ ವಿವಾಹ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬುಧವಾರ (ಡಿ.04) ಅದ್ಧೂರಿಯಾಗಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನವಜೋಡಿಗೆ ನೆಟ್ಟಿಗರು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಅಂದಹಾಗೆ ನಾಗಚೈತನ್ಯ ಅವರು ಎರಡನೇ ಮದುವೆಯಾಗಿದ್ದು, ಸದ್ಯ ಎಲ್ಲರ ಕಣ್ಣು ಅವರ ಮಾಜಿ ಪತ್ನಿ ಹಾಗೂ ನಟಿ ಸಮಂತಾ ಅವರ ಮೇಲೆ ನೆಟ್ಟಿದೆ. ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಏನು ಪೋಸ್ಟ್ ಮಾಡುತ್ತಾರೆಂಬ ಕುತೂಹಲ ಎಲ್ಲರಿಗೂ ಇದೆ. ನವವಿವಾಹಿತರಿಗೆ ಶುಭಾಶಯಗಳನ್ನು ತಿಳಿಸುತ್ತಾರಾ? ಅಥವಾ ಇನ್ನೇನಾದರೂ ಪೋಸ್ಟ್ ಮಾಡುತ್ತಾರಾ? ಎಂದು ಕಾಯುತ್ತಿದ್ದಾರೆ. ಇದರ ನಡುವೆ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಒಂದು ವೈರಲ್ ಆಗಿದೆ.
ಫೈಟ್ ಲೈಕ್ ಎ ಗರ್ಲ್ (ಹುಡುಗಿಯಂತೆ ಹೋರಾಡಿ) ಎಂಬ ಟ್ಯಾಗ್ನೊಂದಿಗೆ ವಿಡಿಯೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಓರ್ವ ಹುಡುಗಿ ಮತ್ತು ಹುಡುಗ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಪರ್ಧೆಯ ಆರಂಭದ ಮೊದಲು, ಹುಡುಗ ಆತ್ಮವಿಶ್ವಾಸದಿಂದ ರಿಂಗ್ ಪ್ರವೇಶಿಸುತ್ತಾನೆ. ಆದರೂ, ಹುಡುಗಿಯ ಹೋರಾಟದ ಮುಂದೆ ಆತ ಸೋಲುತ್ತಾನೆ.
ಇನ್ಸ್ಟಾಗ್ರಾಂ ಸ್ಟೋರಿಯ ಸ್ಕ್ರೀನ್ಶಾಟ್ ತೆಗೆದುಕೊಂಡು ಅಭಿಮಾನಿಗಳು ವೈರಲ್ ಮಾಡಿದ್ದಾರೆ. ಇದು ನೇರವಾಗಿ ನಾಗಚೈತನ್ಯ ಅವರಿಗೆ ನೀಡಿದ ಟಾಂಗ್ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಸುದೀರ್ಘ ಡೇಟಿಂಗ್ ಬಳಿಕ 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ವಿವಾಹವಾದರು. ಸಮಂತಾ ಕೂಡ ಪತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅಭಿಮಾನಿಗಳಿಂದ ಆದರ್ಶ ದಂಪತಿಗಳೆಂದು ಪರಿಗಣಿಸಲ್ಪಟ್ಟ ಸಮಂತಾ ಮತ್ತು ನಾಗಚೈತನ್ಯ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್ ಘೋಷಣೆ ಮಾಡಿದರು. 2021ರಲ್ಲಿ ವಿಚ್ಛೇದನ ಪಡೆದ ನಂತರ, ಸಮಂತಾ ಚಲನಚಿತ್ರಗಳಲ್ಲಿ ಸಕ್ರಿಯರಾದರು. (ಏಜೆನ್ಸೀಸ್)