ಕೊನೆಗೂ 'ರಾಧೇ' ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ಸಲ್ಮಾನ್​

Radhe - Salman - Final
Published on

ಮುಂಬೈ: ಕಳೆದ ವರ್ಷದ ಈದ್​ ಹಬ್ಬಕ್ಕೆ ಸಲ್ಮಾನ್​ ಖಾನ್​ ಅಭಿನಯದ 'ರಾಧೇ' ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾದಿಂದಾಗಿ ಚಿತ್ರದ ಬಿಡುಗಡೆ ಅನಾಮತ್ತಾಗಿ ಮುಂದೂಡಲಾಗಿತ್ತು. ಇದೀಗ ಖುದ್ದು ಸಲ್ಮಾನ್​, 'ರಾಧೇ' ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.

'ರಾಧೇ' ಚಿತ್ರದ ಚಿತ್ರೀಕರಣ ಮುಗಿದರೂ, ಚಿತ್ರದ ಬಿಡುಗಡೆಯ ಬಗ್ಗೆ ಚಿತ್ರತಂಡ ಯಾವೊಂದು ವಿಷಯವನ್ನೂ ಹಂಚಿಕೊಂಡಿರಲಿಲ್ಲ. ಇಷ್ಟಕ್ಕೂ ಚಿತ್ರದ ಬಿಡುಗಡೆ ಯಾವಾಗ? ಕಳೆದ ವರ್ಷವದ ಈದ್​ ಹಬ್ಬಕ್ಕಂತೂ ಚಿತ್ರ ಬಿಡುಗಡೆಯಾಗಿರಲಿಲ್ಲ, ಈ ವರ್ಷವಾದರೂ ಬಿಡುಗಡೆಯಾಗುತ್ತದಾ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

'ರಾಧೇ' ಚಿತ್ರವನ್ನು ಈದ್​ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಲ್ಮಾನ್​ ಘೋಷಿಸಿದ್ದಾರೆ. ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ.

'ಈ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಕಳೆದೊಂದು ವರ್ಷದಿಂದ ಪ್ರದರ್ಶನವಿಲ್ಲದೆ, ಚಿತ್ರಮಂದಿರದವರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ರಾಧೇ' ಚಿತ್ರವನ್ನು ಈದ್​ ಪ್ರಯುಕ್ತ ಮೇನಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದೇವೆ' ಎಂದು ಅವರು ಹೇಳಿಕೊಂಡಿದ್ದಾರೆ.

ಬರೀ ಚಿತ್ರ ಬಿಡುಗಡೆ ಮಾಡುವುದಷ್ಟೇ ಅಲ್ಲ, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

'ರಾಧೇ' ಚಿತ್ರದಲ್ಲಿ ಸಲ್ಮಾನ್​ ಖಾನ್​ಗೆ ನಾಯಕಿಯಾಗಿ ದಿಶಾ ಪಠಾಣಿ ನಟಿಸಿದ್ದು, ಮಿಕ್ಕಂತೆ ಜಾಕಿ ಶ್ರಾಫ್​, ರಣದೀಪ್​ ಹೂಡಾ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು, ಸಲ್ಮಾನ್​ ಖಾನ್​ ಅಭಿನಯದ 'ಕಿಕ್​' ಮತ್ತು 'ದಬಾಂಗ್​ 3' ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಭುದೇವಾ ಅವರು 'ರಾಧೇ' ಚಿತ್ರವನ್ನು ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net