

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಸಲ್ಮಾನ್ ಖಾನ್ ಬಗ್ಗೆ ಜನರಿಗೆ ಸಿಕ್ಕಾಪಟ್ಟೆ ಕೋಪ ಬಂದಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ, ಸಲ್ಮಾನ್ರಂತಹ ಪ್ರಭಾವಿಗಳು ಸುಶಾಂತ್ರಂತಹ ಪ್ರತಿಭಾವಂತರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೊರಗಿನಿಂದ ಬಂದವರನ್ನು ತುಳಿದು, ಸ್ಟಾರ್ ಮಕ್ಕಳನ್ನು ಪೋಷಿಸುತ್ತಾರೆ ಎಂಬ ನಂಬಿಕೆ.
ಅದೇ ಕಾರಣಕ್ಕೆ ಅವರನ್ನ ಜನ ವಿಪರೀತ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸಲ್ಮಾನ್ ಅದೇನು ಮಾಡಿದರೂ, ಜನ ಟ್ರೋಲ್ ಮಾಡುತ್ತಲೇ ಬರುತ್ತಿದ್ದಾರೆ. ಈಗ ಸಲ್ಮಾನ್ ಅವರನ್ನು ಮತ್ತೊಮ್ಮೆ ಟ್ರೋಲಿಗರು ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ.
ಸಲ್ಮಾನ್, 'ಬೀಯಿಂಗ್ ಹ್ಯೂಮನ್' ಎಂಬ ಬ್ರಾಂಡ್ನಡಿ ಟೀಶರ್ಟ್ಗಳನ್ನು ಮಾರುವುದು ಗೊತ್ತೇ ಇದೆ. ಈಗ 'ಬೀಯಿಂಗ್ ಹ್ಯೂಮನ್' ಬ್ರಾಂಡ್ನಡಿ ಫೇಸ್ ಮಾಸ್ಕ್ಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸಲ್ಮಾನ್ ಈ ಮಾಸ್ಕ್ಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಪ್ರಮೋಟ್ ಮಾಡುತ್ತಿದ್ದಾರೆ. ಒಂದು ಕೊಂಡರೆ, ಇನ್ನೊಂದು ಫ್ರೀ ಸಿಗುತ್ತದೆ ಎಂದು ಮೆಸೇಜ್ ಹಾಕಿದ್ದಾರೆ.
ಸಲ್ಮಾನ್ ಅವರ ಈ ಪೋಸ್ಟ್, ಜನರ ಆಕ್ರೋಷಕ್ಕೆ ಗುರಿಯಾಗಿದೆ. ಇದಕ್ಕೆ ಉತ್ತರಿಸಿರುವ ಹಲವರು, ಸಲ್ಮಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೈಕಿ ಒಬ್ಬರು, '10 ರೂಪಾಯಿ ಸಹಾಯ ಮಾಡಿ, ಸಾವಿರ ರೂಪಾಯಿ ಪ್ರಚಾರ ಪಡೆಯುತ್ತೀಯ. ನೀನೊಬ್ಬ ಕ್ರಿಮಿನಲ್. ಅದನ್ನು ಮುಚ್ಚಿಹಾಕುವುದಕ್ಕೆ ಇಂತಹ ಕೆಲಸ ಮಾಡುತ್ತಿದ್ದೀಯ' ಎಂದು ಆರೋಪಿಸಿದ್ದಾರೆ.
ಇದಕ್ಕೆ ಇನ್ನೊಬ್ಬರು, 'ನೀನು ಇಷ್ಟು ವರ್ಷ ಮಾಸ್ಕ್ ಹಾಕಿಕೊಂಡೇ ಬದುಕುತ್ತಿದ್ದೀರಾ. ನಿನ್ನಲ್ಲಿನ್ನೂ ಮನುಷ್ಯತ್ವ ಇದೆ ಎಂದು ನಿನಗನಿಸುತ್ತದಾ?' ಎಂದು ಪ್ರಶ್ನಿಸಿದ್ದಾರೆ. ಇನ್ನೂ ಹಲವರು, ಬೀಯಿಂಗ್ ಹ್ಯೂಮನ್ ಮಾಸ್ಕ್ಗಳನ್ನು ಬಾಯ್ಕಾಟ್ ಮಾಡಬೇಕು ಎಂದು ಅಭಿಯಾನವನ್ನೇ ಪ್ರಾರಂಬಿಸಿದ್ದಾರೆ.