

ಭಾರತದ ಹೆಮ್ಮೆಯ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಬಹಳ ಕ್ರಿಟಿಕಲ್ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಹೀಗಿರುವಾಗ, ಅವರು ಸುರಕ್ಷಿತವಾಗಿ ಬೇಗ ಮನೆಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಈಗಾಗಲೇ ಅವರ ಅಭಿಮಾನಿಗಳು ಗೆಟ್ವೆಲ್ ಸೂನ್ ಎಸ್ಪಿಬಿ ಎಂಬ ಅಭಿಯಾನವನ್ನೇ ಶುರು ಮಾಡಿದ್ದಾರೆ. ತಮ್ಮ ಮೆಚ್ಚಿನ ಗಾಯಕ ಬೇಗ ಆರೋಗ್ಯಕರವಾಗಿ ಮನೆಗೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಬರೀ ಅಭಿಮಾನಿಗಳಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಹ ಎಸ್.ಪಿ.ಬಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಈ ಕುರಿತು ಇಳಯರಾದ ಒಂದು ವಿಡಿಯೋ ಮಾಡಿದ್ದಾರೆ. ತಮ್ಮ ಮೆಚ್ಚಿನ ಗಾಯಕ ಬಾಲು ಅವರನ್ನು ಬೇಗ ವಾಪಸ್ಸು ಬಾ ಎಂದು ಕರೆದಿದ್ದಾರೆ. ಇನ್ನು, ಎ.ಆರ್. ರೆಹಮಾನ್ ಸಹ ಸೋಷಿಯಲ್ ಮೀಡಿಯಾ ಮೂಲಕ, ಎಸ್.ಪಿ.ಬಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲ, ಅವರು ಬೇಗ ಮನೆಗೆ ಬರಲಿ ಎಂದು ಪ್ರಾರ್ಥಿಸಿ ಎಂದು ಸಂಗೀತಾಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಬರೀ ಇಳಯರಾಜ ಅಥವಾ ರೆಹಮಾನ್ ಮಾತ್ರ ಅಲ್ಲ. ಧನುಶ್, ಸೌಂದರ್ಯ ರಜನಿಕಾಂತ್, ನಿರ್ದೇಶಕ ಶೇಖರ್ ಕಪೂರ್, ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್, ನಟ ಪ್ರಸನ್ನ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ಎಸ್.ಪಿ.ಬಿ ಗುಣಮುಖರಾಗಲಿ ಮನೆಗೆ ಮರಳಲಿ ಎಂದು ಹಾರೈಸುವುದರ ಜತೆಗೆ, ಸಂಗೀತಾಭಿಮಾನಿಗಳಿಗೂ ಕರೆ ನೀಡಿದ್ದಾರೆ.
ಆಗಸ್ಟ್ ಐದರಂದು, ಎಸ್.ಪಿ.ಬಿ ಅವರನ್ನು ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಗೆ ಎಂಜಿಎಂ ಹೆಲ್ತ್ಕೇರ್ಗೆ ದಾಖಲಿಸಲಾಗಿತ್ತು. ಆ ನಂತರ ಅವರೇ ತಮಗೆ ಕರೊನಾ ಪಾಸಿಟಿವ್ ಇದೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಹೇಳಿದ್ದರು. ಆದರೆ, ಶುಕ್ರವಾರ ಸಂಜೆ, ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರಿಗೆ ಐಸಿಯೂನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.