

Salman Khan : ವಿಶ್ವ ಸುಂದರಿ ಐಶ್ವರ್ಯಾ ರೈ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ. ನೀನೇನು ಐಶ್ವರ್ಯಾ ರೈಯಾ... ಎಂದು ಇಂದಿಗೂ ಕೆಲವರನ್ನು ವ್ಯಂಗ್ಯವಾಡುವುದನ್ನು ನಾವು ಕೇಳುತ್ತಿದ್ದೇವೆ. ಅಷ್ಟರಮಟ್ಟಿಗೆ ಐಶ್ವರ್ಯಾ ತಮ್ಮ ಬ್ಯೂಟಿಯಿಂದಲೇ ಮನೆ ಮಾತಾಗಿದ್ದರು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಅವರನ್ನು ಆರಾಧಿಸುತ್ತಿದ್ದರು. ಅನೇಕ ಮಂದಿ ಆಕೆಯನ್ನು ಹುಚ್ಚರಂತೆ ಪ್ರೀತಿ ಮಾಡುತ್ತಿದ್ದರು. ಅವರಲ್ಲಿ ಕೆಲವರಿಗೆ ಐಶ್ವರ್ಯಾ ಪ್ರೀತಿಯ ಭಾಗ್ಯವೂ ಸಿಕ್ಕಿತು. ಅಂಥವರಲ್ಲಿ ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಕೂಡ ಒಬ್ಬರು. ಒಂದು ಕಾಲದಲ್ಲಿ, ಸಲ್ಮಾನ್ ಮತ್ತು ಐಶ್ವರ್ಯಾ ಪ್ರೀತಿಸುತ್ತಿದ್ದರು. ಆದರೆ, ಕೆಲವೇ ಸಮಯದಲ್ಲಿ ಅವರಿಬ್ಬರು ಬೇರೆಯಾದರು. 2002ರಲ್ಲಿ ಅವರಿಬ್ಬರ ಬ್ರೇಕಪ್ ಕಥೆ ಬೀಟೌನ್ನಲ್ಲಿ ಭಾರಿ ಸಂಚಲನ ಮೂಡಿಸಿತು.
ಇತ್ತೀಚೆಗೆ, ಜಾಹೀರಾತು ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರು ನಡೆಸಿದ ಸಂದರ್ಶನದಲ್ಲಿ ಐಶ್ವರ್ಯಾ ರೈ ಮತ್ತು ಸಲ್ಮಾನ್ ನಡುವಿನ ಸಂಬಂಧ ಮುರಿದುಬಿದ್ದ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ, ಪ್ರಹ್ಲಾದ್ ತಮ್ಮ ವೃತ್ತಿಜೀವನದ ಆರಂಭದಿಂದಲೂ ಐಶ್ವರ್ಯಾ ಜತೆಗಿದ್ದಾರೆ. ಕಕ್ಕರ್ ಅವರು ಮುಂಬೈನಲ್ಲಿರುವ ಐಶ್ವರ್ಯಾ ಅವರ ತಾಯಿಯ ಕಟ್ಟಡದಲ್ಲೇ ವಾಸಿಸುತ್ತಿದ್ದಾರೆ.
ಸಲ್ಮಾನ್ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ಬಾಲಿವುಡ್ ಚಿತ್ರರಂಗ ಐಶ್ವರ್ಯಾ ಅವರನ್ನು ದೂರವಿಟ್ಟಿತು ಎಂದು ಕಕ್ಕರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆ ಸಮಯದಲ್ಲಿ ಐಶ್ವರ್ಯಾ ಅವರು ತುಂಬಾ ದುಃಖಿತರಾಗಿದ್ದರು. ಈ ವಿಷಯಗಳ ಬಗ್ಗೆ ಚಿಂತಿಸಬೇಡಿ ಎಂದು ನಾನು ಅವರಿಗೆ ಹೇಳುತ್ತಿದ್ದೆ. ಸಲ್ಮಾನ್ ಗಾಗಿ ಇಡೀ ಚಿತ್ರರಂಗ ತನ್ನನ್ನು ದೂರ ಮಾಡುತ್ತಿದೆ ಎಂಬ ಅಂಶವನ್ನು ಐಶ್ವರ್ಯಾ ಅವರು ಸಹಿಸಿಕೊಳ್ಳಲು ಆಗಲಿಲ್ಲ. ಆದಾಗ್ಯೂ, ಬ್ರೇಕಪ್ ಆದ ನಂತರವೇ ಐಶ್ವರ್ಯಾ ತುಂಬಾ ಶಾಂತಿಯುತ ಜೀವನವನ್ನು ನಡೆಸಿದರು. ಏಕೆಂದರೆ, ಸಲ್ಮಾನ್ ಪ್ರೀತಿ ಮತ್ತು ಕೋಪದಿಂದ ಹುಚ್ಚರಂತೆ ವರ್ತಿಸುತ್ತಿದ್ದನು ಎಂದು ಹೇಳಿದ್ದಾರೆ.
ಸಲ್ಮಾನ್, ಐಶ್ವರ್ಯಾ ಜೊತೆ ತುಂಬಾ ದೈಹಿಕವಾಗಿ ಇದ್ದನು. ಆಕೆಯ ಬಗ್ಗೆ ತುಂಬಾ ಗೀಳನ್ನು ಹೊಂದಿದ್ದನು. ಇಷ್ಟೊಂದು ಗೀಳಿನಿಂದ ಕೂಡಿರುವ ವ್ಯಕ್ತಿಯೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ ಎಂದು ನಾನು ಐಶ್ವರ್ಯಾರನ್ನು ಕೇಳಿದ್ದೆ ಎಂದರು. ಸಲ್ಮಾನ್ ಜೊತೆಗಿನ ಜಗಳಗಳ ಬಗ್ಗೆ ಐಶ್ವರ್ಯಾ ನಿಮ್ಮ ಬಳಿ ಏನಾದರೂ ಮಾಹಿತಿ ಹಂಚಿಕೊಂಡಿದ್ದಾರೆಯೇ ಎಂದು ಕೇಳಿದಾಗ, ಪ್ರಹ್ಲಾದ್, ಇಲ್ಲ ಎಂದರು. ಆದರೆ, ಬಹುತೇಕ ವಿಚಾರಗಳ ಬಗ್ಗೆ ನನಗೆ ತಿಳಿದಿದೆ. ಏಕೆಂದರೆ, ನಾನು ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದೆ. ಅಲ್ಲಿ ಸಲ್ಮಾನ್, ಐಶ್ವರ್ಯಾಳೊಂದಿಗೆ ಜಗಳ ಮಾಡುತ್ತಿದ್ದನು. ಅಲ್ಲದೆ, ಗೋಡೆಗೆ ತನ್ನ ತಲೆಯನ್ನು ಹೊಡೆದುಕೊಳ್ಳುತ್ತಾ ವಿಶ್ರಾಂತಿ ಕೋಣೆಯಲ್ಲಿ ಬಿಗ್ ಸೀನ್ ಕ್ರಿಯೆಟ್ ಮಾಡುತ್ತಿದ್ದನು. ಅಷ್ಟರ ಮಟ್ಟಿಗೆ ಸಲ್ಮಾನ್, ಪ್ರೀತಿಯಲ್ಲಿ ಹುಚ್ಚನಂತೆ ವರ್ತಿಸುತ್ತಿದ್ದ. ಆತನ ವರ್ತನೆಯಿಂದ ಐಶ್ವರ್ಯಾಗೆ ಬೇಜಾರಾಗಿತ್ತು. ಆತನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದು ಐಶ್ವರ್ಯಾಗೆ ಮಾತ್ರವಲ್ಲದೆ, ಆಕೆಯ ಪಾಲಕರಿಗೂ ನೆಮ್ಮದಿ ನೀಡಿತು. ಬ್ರೇಕಪ್ ಆಗಿದ್ದು, ಐಶ್ವರ್ಯಾಗೆ ನೋವಾಗಲಿಲ್ಲ. ಆದರೆ, ಇಡೀ ಚಿತ್ರರಂಗ ಸಲ್ಮಾನ್ ಪರವಾಗಿ ನಿಂತಿದ್ದಕ್ಕೆ ಆಕೆಗೆ ತುಂಬಾ ನೋವಾಯಿತು ಎಂದು ಕಕ್ಕರ್ ಹೇಳಿದ್ದಾರೆ.
ಅಂದಹಾಗೆ, ಐಶ್ವರ್ಯಾ ಅವರು ಈಗಲೂ ಅದೇ ನೋವಿನಲ್ಲಿ ಸ್ವಲ್ಪ ಮಟ್ಟಿಗೆ ಬಳಲುತ್ತಿದ್ದಾರೆ ಎಂದು ಪ್ರಹ್ಲಾದ್ ಕಕ್ಕರ್ ಹೇಳಿದರು. ಅದಕ್ಕಾಗಿಯೇ ಅವರು ಮೊದಲಿನಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿಲ್ಲ. ಸಲ್ಮಾನ್ ಘಟನೆಯಿಂದಲೇ ಉದ್ಯಮದ ಮೇಲಿನ ಅವರ ಬದ್ಧತೆ ನಿಜವಾಗಿಯೂ ಬಿರುಕು ಬಿಟ್ಟಿದೆ. ಇಲ್ಲದಿದ್ದರೆ ಅವರು ಸಿನಿಮಾ ಇಂಡಸ್ಟ್ರಿಗೆ ತುಂಬಾ ಬದ್ಧರಾಗಿರುತ್ತಿದ್ದರು. ಸಲ್ಮಾನ್ ಬ್ರೇಕಪ್ ಬಳಿಕ ಐಶ್ವರ್ಯಾ ಅವರು ಸಿನಿಮಾ ಉದ್ಯಮವನ್ನು ನಂಬಲಿಲ್ಲ. ಏಕೆಂದರೆ, ಇಡೀ ಇಂಡಸ್ಟ್ರಿ ನ್ಯಾಯಯುತವಾಗಿರಲಿಲ್ಲ. ಐಶ್ವರ್ಯಾ ವಿಚಾರದಲ್ಲಿ ಎಲ್ಲರೂ ಏಕಪಕ್ಷೀಯವಾಗಿ ವರ್ತಿಸಿದರು. ತನಗೆ ತುಂಬಾ ದ್ರೋಹ ಬಗೆದರು ಎಂದು ಐಶ್ವರ್ಯಾ ಭಾವಿಸಿದರು ಎಂದು ಕಕ್ಕರ್ ಹೇಳಿದರು.
ಅಂದಹಾಗೆ, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ 1999ರಲ್ಲಿ ಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ಸೆಟ್ನಲ್ಲಿ ಭೇಟಿಯಾಗಿ ಸಂಬಂಧ ಆರಂಭಿಸಿದರು. ಆದರೆ, ಈ ಸಂಬಂಧವು ವಿವಾದಾತ್ಮಕವಾಗಿ 2002ರಲ್ಲಿ ಮುರಿಯಿತು. ಐಶ್ವರ್ಯಾ ರೈ ನಂತರ ಅಭಿಷೇಕ್ ಬಚ್ಚನ್ ಅವರನ್ನು 2006ರಲ್ಲಿ ಗುರು ಚಿತ್ರದ ಸೆಟ್ನಲ್ಲಿ ಭೇಟಿಯಾದರು. ಇವರಿಬ್ಬರ ನಡುವೆ ಪ್ರೇಮ ಸಂಬಂಧವು ಬೆಳೆಯಿತು ಮತ್ತು 2007ರ ಏಪ್ರಿಲ್ 20ರಂದು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. (ಏಜೆನ್ಸೀಸ್)