ಹಾರುವ ತಟ್ಟೆಯನ್ನು ಹೊಡೆದುರುಳಿಸಿದ ಚೀನಾ! ವೈರಲ್​ ವಿಡಿಯೋ ಹಿಂದಿರುವ ಅಸಲಿಯತ್ತೇನು? Flying Saucer

Flying Saucer
Published on

Flying Saucer : ಚೀನಾದ ಕ್ಷಿಪಣಿಯು ಗುರುತಿಸಲಾಗದ ವಸ್ತುವೊಂದನ್ನು ನಾಶಪಡಿಸುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಗುರುತಿಸಲಾಗದ ಆ ವಸ್ತುವನ್ನು ಹಾರುವ ತಟ್ಟೆ (UFO) ಎಂದು ಹಲವರು ಹೇಳಿಕೊಳ್ಳುತ್ತಿದ್ದಾರೆ. ಈ ಘಟನೆ ಸೆಪ್ಟೆಂಬರ್ 12ರಂದು ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ ಚೀನಾದ ಶಾಂಡೊಂಗ್ ಪ್ರಾಂತ್ಯದ ವೈಫಾಂಗ್ ಮತ್ತು ರಿಝಾವೊ ನಗರಗಳ ಬಳಿ ನಡೆದಿದೆ. ಸ್ಥಳೀಯ ನಿವಾಸಿಗಳು ಸೆರೆಹಿಡಿದ ಈ ವಿಡಿಯೋಗಳಲ್ಲಿ ಗುರುತಿಸಲಾಗದ ವಸ್ತುವೊಂದು ಹಾರುತ್ತಿರುವುದನ್ನು ಮತ್ತು ಕ್ಷಿಪಣಿ ಡಿಕ್ಕಿ ಹೊಡೆದು ಸ್ಫೋಟಗೊಳ್ಳುವುದನ್ನು ತೋರಿಸಲಾಗಿದೆ.

ಚೀನಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಕೆಂಪು ಬೆಂಕಿಯ ಉಂಡೆಯಂತೆ ಕಾಣುವ ಕ್ಷಿಪಣಿಯು ಅಪರಿಚಿತ ವಸ್ತುವಿಗೆ ಡಿಕ್ಕಿ ಹೊಡೆಯುವುದನ್ನು ಮತ್ತು ನಂತರ ಎರಡೂ ವಸ್ತುಗಳು ಸ್ಫೋಟವಾಗುವುದನ್ನು ತೋರಿಸಲಾಗಿದೆ. ಸ್ಫೋಟದ ನಂತರ ಅವಶೇಷಗಳು ನೆಲಕ್ಕೆ ಬೀಳುತ್ತವೆ. ಶಾಂಡೊಂಗ್ ಪ್ರಾಂತ್ಯದ ಬಳಿಯ ಬೋಹೈ ಸಮುದ್ರದಲ್ಲಿ ಚೀನಾ ಮಿಲಿಟರಿ ವ್ಯಾಯಾಮ ನಡೆಸುತ್ತಿರುವಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ.

ಇನ್ನು ಈ ಘಟನೆಯ ಬಗ್ಗೆ ಚೀನಾ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಫೋಟಕ್ಕೆ ಕಾರಣವೇನು ಏನು ಎಂಬುದರ ಕುರಿತು ಚೀನಾ ಅಧಿಕಾರಿಗಳು ವಿವರಣೆಯನ್ನು ನೀಡಿಲ್ಲ. ಚೀನಾದ ಸೇನೆಯು ಡ್ರೋನ್, ಉಲ್ಕಾಶಿಲೆ ಅಥವಾ ಹಾರುವ ತಟ್ಟೆಯನ್ನು ಹೊಡೆದುರುಳಿಸಿದೆ ಎಂದು ಅನೇಕ ಚರ್ಚೆಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇನ್ನು ಗುರುತಿಸಲಾಗದ ಈ ವಸ್ತುವು ನಕಲಿ ಡ್ರೋನ್ ಅಥವಾ ತರಬೇತಿಗಾಗಿ ಬಳಸಿದ ಕ್ಷಿಪಣಿಯಾಗಿರಬಹುದು ಅಥವಾ ಬೋಹೈ ಸಮುದ್ರದಲ್ಲಿ ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಸೈನಿಕರು ಅದನ್ನು ಹೊಡೆದುರುಳಿಸಿದ್ದಾರೆ ಎಂದು ಇತರರು ಹೇಳುತ್ತಿದ್ದಾರೆ.

ಇನ್ನು ಆ ಅಜ್ಞಾತ ವಸ್ತುವಿಗೆ ಉಲ್ಕಾಶಿಲೆಯಂತಹ ಬಾಲವಿರಲಿಲ್ಲ ಎಂಬ ವಾದವೂ ಪ್ರಬಲವಾಗಿದೆ. ಬಾಹ್ಯಾಕಾಶ ಶಿಲೆಯ ಸಣ್ಣ ತುಂಡುಗಳಾಗಿರುವ ಉಲ್ಕಾಶಿಲೆಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಅತಿ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಇದು ಗಾಳಿಯ ಮೂಲಕ ಚಲಿಸುವಾಗ ಘರ್ಷಣೆಗೆ ಕಾರಣವಾಗುತ್ತದೆ. ಉಲ್ಕಾಶಿಲೆಯ ಸುತ್ತಲೂ ವಿದ್ಯುತ್ ಚಾರ್ಜ್ ಮಾಡಿದ ಗಾಳಿಯ ಪ್ರಕಾಶಮಾನವಾದ ಬಾಲವನ್ನು ಸೃಷ್ಟಿಸುತ್ತದೆ. ಇದಲ್ಲದೆ, ವಿಡಿಯೋದಲ್ಲಿರುವ ವಸ್ತುವಿನಂತೆ ಉಲ್ಕಾಶಿಲೆಗಳು ಸಾಮಾನ್ಯವಾಗಿ ನೆಲಕ್ಕೆ ಸಮಾನಾಂತರವಾಗಿ ಹಾರುವುದಿಲ್ಲ ಎಂದು ಹಲವರು ಗಮನಸೆಳೆದಿದ್ದಾರೆ.

ವಿಜ್ಞಾನಿಗಳು ಹೇಳುವಂತೆ ಉಲ್ಕೆಗಳು ಸಾಮಾನ್ಯವಾಗಿ ಗಂಟೆಗೆ 25,000 ರಿಂದ 1,60,000 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತವೆ. ಒಂದು ವೇಳೆ ಚೀನಾದ ಕ್ಷಿಪಣಿ, ಉಲ್ಕೆಯನ್ನೇ ನಾಶ ಮಾಡಿದ್ದರೆ, ಅಂತಹ ವೇಗವಾಗಿ ಚಲಿಸುವ ವಸ್ತುವನ್ನು ಪ್ರತಿಬಂಧಿಸುವ ಚೀನಾದ ಸಾಮರ್ಥ್ಯವು ಮಿಲಿಟರಿ ರಕ್ಷಣಾ ತಂತ್ರಜ್ಞಾನದಲ್ಲಿ ಒಂದು ಪ್ರಮುಖ ಪ್ರಗತಿಯನ್ನು ಸೂಚಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net