

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈ ನಗರದಿಂದ ಹೊರಗಿರುವ ಫಾರ್ಮ್ ಹೌಸ್ನಲ್ಲಿ ಸೋಹೆಲ್ ಖಾನ್ ಪುತ್ರನೊಂದಿಗೆ ಕಾಲಕಳೆಯುತ್ತಿದ್ದಾರೆ. ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಚಟುವಟಿಕೆ ಹಮ್ಮಿಕೊಂಡು ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ಹೀಗಿರುವಾಗಲೇ ಮೊನ್ನೆ ಮೊನ್ನೆಯಷ್ಟೇ ಸಲ್ಮಾನ್, ಸ್ವಂತ ಯೂಟ್ಯೂಬ್ ಚಾನೆಲ್ ತೆರೆಯಲಿದ್ದಾರೆ ಎಂಬ ಸುದ್ದಿಯನ್ನು ಇದೇ ವಿಜಯವಾಣಿ ವೆಬ್ಸೈಟ್ನಲ್ಲಿ ಓದಿದ್ದೀರಿ. ಈಗ ಆ ಯೂಟ್ಯೂಬ್ ಚಾನೆಲ್ನಲ್ಲಿ ಹಾಡೊಂದನ್ನು ಬಿಡುಗಡೆ ಮಾಡಲು ಸಲ್ಮಾನ್ ಖಾನ್ ಪ್ಲ್ಯಾನ್ ಮಾಡಿದ್ದಾರೆ. ಅದರಲ್ಲಿ ಮೊದಲನೆಯದಾಗಿ ‘ಪ್ಯಾರ್ ಕರೊನಾ..‘ ಹೆಸರಿನ ಹಾಡು ಸೋಮವಾರ ರಿಲೀಸ್ ಆಗಲಿದೆ.
ವಿಶೇಷ ಏನೆಂದರೆ, ‘ಪ್ಯಾರ್ ಕರೊನಾ..’ ಹಾಡಿಗೆ ಸಾಹಿತ್ಯ ಬರೆದು ಧ್ವನಿಯನ್ನೂ ನೀಡಿದ್ದಾರೆ ಸಲ್ಮಾನ್ ಖಾನ್. ಈ ಹಾಡಿನಲ್ಲಿ ಕರೊನಾ ಕುರಿತು ಜಾಗೃತಿ ಮತ್ತು ಕರೊನಾ ವಾರಿಯರ್ ಬಗ್ಗೆಯೂ ಸಾಹಿತ್ಯವನ್ನು ಅಳವಡಿಸಿದ್ದಾರೆ. ಈಗಾಗಲೇ ಸಣ್ಣ ಟೀಸರ್ ಮೂಲಕ ಬ್ಲ್ಯಾಕ್ ಆ್ಯಂಡ್ ವೈಟ್ ಅವತಾರದಲ್ಲಿ ನೆಟ್ಟಿಗರ ಮುಂದೆ ಬಂದಿರುವ ಸಲ್ಮಾನ್, ಹಾಡಿನ ಬಗ್ಗೆ ಕಿರಿದಾಗಿ ಮಾಹಿತಿ ನೀಡಿದ್ದಾರೆ. ಸಾಜಿದ್ ವಜಿದ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್)