

‘ಸಾಹೋ‘ ಸಿನಿಮಾ ಮೂಲಕ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಟಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದರು. ಬಹುಭಾಷೆಯಲ್ಲಿ ತೆರೆಕಂಡ ಆ ಚಿತ್ರಕ್ಕೆ ಹೇಳಿಕೊಳ್ಳುವ ಯಶಸ್ಸು ಸಿಗದಿದ್ದರೂ, ಗಳಿಕೆ ವಿಚಾರದಲ್ಲಿ ಒಳ್ಳೇ ಕಮಾಯಿ ಮಾಡಿತು. ಶ್ರದ್ಧಾಗೂ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯನ್ನು ಪರಿಚಯಿಸಿತು. ಇದೀಗ ಇದೇ ನಟಿ ಮತ್ತೊಮ್ಮೆ ಸೌತ್ ಕಡೆ ಮುಖಮಾಡಿದ್ದಾರೆ. ಅಂದರೆ, ಮತ್ತೊಂದು ತೆಲುಗು ಚಿತ್ರಕ್ಕೆ ಅವರನ್ನು ಕರೆತರುವ ಲೆಕ್ಕಾಚಾರದಲ್ಲಿದ್ದಾರೆ ಟಾಲಿವುಡ್ ನಿರ್ದೇಶಕರು. ಈ ಮೊದಲು ಈ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ ಎನ್ನಲಾಗುತ್ತಿತ್ತು.
ಹೌದು, ಪ್ರಿನ್ಸ್ ಮಹೇಶ್ ಬಾಬು ಮತ್ತು ‘ಗೀತ ಗೋವಿಂದಂ’ ಚಿತ್ರದ ನಿರ್ದೇಶಕ ಪರಸುರಾಮ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಸಿದ್ಧವಾಗುತ್ತಿದ್ದು, ಆ ಸಿನಿಮಾಕ್ಕೆ ಶ್ರದ್ಧಾ ಅವರನ್ನು ಕರೆತರುವ ವಿಚಾರ ನಿರ್ದೇಶಕರದ್ದು. ವಿಶೇಷ ಏನೆಂದರೆ, ಈ ಸಿನಿಮಾ ಸಹ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಲಿದೆಯಂತೆ. ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗೆ ಡಬ್ ಆಗಿ ತೆರೆಕಾಣಲಿದೆಯಂತೆ. ಅಷ್ಟೇ ಅಲ್ಲ ಅಂದುಕೊಂಡಂತೆ ನಡೆದರೆ, ಮಹೇಶ್ ಬಾಬು ಅವರ ಮೊದಲ ಬಹುಭಾಷಾ ಸಿನಿಮಾ ಇದಾಗಿರಲಿದೆ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದೆ. (ಏಜೆನ್ಸೀಸ್)