

ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಇದ್ದೂ ಇಲ್ಲದಂತೆ ಇರುವವರು ಸಲ್ಮಾನ್ ಖಾನ್. ಎಷ್ಟು ಬೇಕೋ ಅಷ್ಟೇ ಕಾಣಿಸಿಕೊಳ್ಳುವ ಸಲ್ಮಾನ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಲಾಗುತ್ತದೆ. ಆದರೂ ಅವಕ್ಕೆಲ್ಲ ಸಲ್ಮಾನ್ ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ. ಈಗ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಬಗ್ಗೆ ಆಗುವ ಟ್ರೋಲ್ಗಳಿಗೆ ಉತ್ತರ ಕೊಟ್ಟಿದ್ದಾರೆ.
ಸಲ್ಮಾನ್ ಸಹೋದರ ಅರ್ಬಾಜ್ ಖಾನ್, 'ಪಿಂಚ್ 2' ಎನ್ನುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಂಡು, ತಮ್ಮ ಕುರಿತಾದ ಟ್ರೋಲ್ಗಳಿಗೆ ಉತ್ತರ ಕೊಡುತ್ತಾರೆ. ಈ ಕಾರ್ಯಕ್ರಮದ ವಿಶೇಷ ಎಪಿಸೋಡ್ನಲ್ಲಿ ಇತ್ತೀಚೆಗೆ ಸಲ್ಮಾನ್ ಖಾನ್ ಸಹ ಕಾಣಿಸಿಕೊಂಡಿದ್ದಾರೆ. ತಮ್ಮ ಕುರಿತು ಇಷ್ಟ ಬಂದಂತೆ ಮಾತನಾಡುವ ಜನರಿಗೆ, ತಮ್ಮದೇ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಅದರಲ್ಲೂ 'ರಾಧೇ' ಚಿತ್ರ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಕೆಟ್ಟ ವಿಮರ್ಶೆಗಳು ಬಂದಾಗ, ಕೆಲವರು ಚಿತ್ರ ಚೆನ್ನಾಗಿಲ್ಲದಿರುವುದರಿಂದ ತಮ್ಮ ದುಡ್ಡು ವಾಪಸ್ಸು ಕೊಡುವುದಕ್ಕೆ ಸಲ್ಮಾನ್ಗೆ ಉತ್ತರಿಸಿದ್ದರು. ಈ ಕುರಿತು ಉತ್ತರಿಸಿರುವ ಸಲ್ಮಾನ್, 'ನಾನ್ಯಾಕೆ ನಿಮಗೆ ದುಡ್ಡು ಕೊಡಬೇಕು. ನಾನು ನಿಮ್ಮ ದುಡ್ಡನ್ನೇನೂ ಕದ್ದಿಲ್ಲ. ಬಹುಶಃ ನಿಮ್ಮ ಹೃದಯವನ್ನು ಕದ್ದಿರಬಹುದು' ಎಂದು ಹೇಳಿಕೊಂಡಿದ್ದಾರೆ.
ಇನ್ನು, ನಿಮಗೆ ಅಭಿನಯ ಬರುವುದಿಲ್ಲ, ಬರೀ ಶೋಆಫ್ ಮಾಡುತ್ತೀರಿ ಎಂದು ಪ್ರೇಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಲ್ಮಾನ್. 'ಆಯ್ತು, ನೀವು ಮಾಡಿ. ನಿಮಗೆ ಯಾರು ಬೇಡ ಅಂದಿದ್ದು? ಶೋಆಫ್ ಮಾಡುವುದಕ್ಕೆ ಧೈರ್ಯಬೇಕು' ಎಂದು ಹೇಳಿದ್ದಾರೆ.
ಸದ್ಯ 'ಟೈಗರ್ 3' ಚಿತ್ರದಲ್ಲಿ ಅಭಿನಯಿಸುತ್ತಿರುವ ಸಲ್ಮಾನ್, ಮುಂದಿನ ದಿನಗಳಲ್ಲಿ 'ಭಾಯ್ಜಾನ್', 'ಕಿಕ್ 2' ಮುಂತಾದ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಇದಲ್ಲದೆ, ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಮತ್ತು ಶಾರೂಖ್ ಖಾನ್ ಅಭಿನಯದ 'ಪಠಾಣ್' ಚಿತ್ರಗಳಲ್ಲೂ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.