ಸಲಗದ ಜತೆ ಒಂದು ಸಂಜೆ; ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ಮಾತು, ಹಾಡು, ನೃತ್ಯ..

Salaga 1
Published on

ಬೆಂಗಳೂರು: ಏಪ್ರಿಲ್ 10ಕ್ಕೆ ಹೊಸಪೇಟೆಯಲ್ಲಿ ಆಯೋಜಿತವಾಗಿತ್ತು ‘ದುನಿಯಾ’ ವಿಜಯ್ ಅಭಿನಯದ ಕೆ.ಪಿ ಶ್ರೀಕಾಂತ್ ನಿರ್ವಣದ ‘ಸಲಗ’ ಚಿತ್ರದ ಪ್ರೀ-ರಿಲೀಸ್ ಇವೆಂಟ್. ಆದರೆ, ಕರೊನಾದಿಂದ ಈ ಕಾರ್ಯಕ್ರಮವನ್ನು ಹೊಸಪೇಟೆಯ ಜನ ಮಿಸ್ ಮಾಡಿಕೊಂಡರು. ಈಗ ಅದೇ ಕಾರ್ಯಕ್ರಮ ಸದ್ದಿಲ್ಲದೆ ಬೆಂಗಳೂರಿನಲ್ಲಿ ಭಾನುವಾರ ಮುಗಿದಿದೆ. ಈ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಟರಾದ ಶಿವರಾಜಕುಮಾರ್, ಉಪೇಂದ್ರ, ಪುನೀತ್ ರಾಜಕುಮಾರ್, ಭೈರತಿ ಸುರೇಶ್, ಸಂತೋಷ್ ಆನಂದರಾಮ್ ಮುಂತಾದವರು ಬಂದಿದ್ದರು. ಚಿತ್ರ ಗೆಲ್ಲಲಿ ಎಂದು ಚಿತ್ರತಂಡದವರಿಗೆ ಶುಭ ಹಾರೈಸಿದರು.

ಎಲ್ಲ ಬಿಡುಗಡೆಯ ಮುಂಚಿನ ಕಾರ್ಯಕ್ರಮಗಳಲ್ಲಿ ಇರುವಂತೆ ಇಲ್ಲೂ ಹಾಡು, ನೃತ್ಯಗಳಿತ್ತು. ಚಿತ್ರಕ್ಕಾಗಿ ‘ಟಿಣಿಂಗ ಮಿಣಿಂಗ ಟಿಶ್ಯಾ ...’ ಎಂಬ ಹಾಡು ಹಾಡಿರುವ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ, ಅದೇ ಹಾಡನ್ನು ಪ್ರೇಕ್ಷಕರೆದುರು ಹಾಡಿ ರಂಜಿಸಿದರು. ಮಧ್ಯೆಮಧ್ಯೆ, ಚಿತ್ರತಂಡದವರು ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

‘ನೀವು ಬಣ್ಣ ಹಾಕಿಕೊಂಡು ನಾಟಕ ಮಾಡ್ತೀರಿ. ನಾವು ಬಣ್ಣ ಹಚ್ಚದೆ ನಾಟಕ ಮಾಡ್ತೀವಿ’ ಎಂದೇ ಮಾತು ಶುರು ಮಾಡಿದ ಡಿ.ಕೆ. ಶಿವಕುಮಾರ್, ‘ನಾನು ಸಹ ಚಿತ್ರರಂಗದವನು. ಪ್ರದರ್ಶಕನಾಗಿ ಕೆಲಸ ಮಾಡುತ್ತಿದ್ದೆ. ಇನ್ನೊಂದು ವರ್ಷದಲ್ಲಿ ಮೈಸೂರು ರಸ್ತೆ ಮುಂತಾದ ಕಡೆ 25 ಚಿತ್ರಮಂದಿರಗಳು ನಿಮ್ಮ ಸೇವೆಗೆ ಸಿದ್ಧವಿರುತ್ತದೆ. ಮುಂಚೆ ನಾನೇ ಗಾಂಧಿನಗರದಿಂದ ಟೂರಿಂಗ್ ಟಾಕೀಸ್​ವರೆಗೂ ಡಬ್ಬ ಹೊರುತ್ತಿದ್ದೆ. ಮಧ್ಯೆ, ನಂಟು ಬಿಟ್ಟು ಹೋಗಿತ್ತು. ಈಗ ಪುನಃ ಪ್ರಾರಂಭವಾಗಿದೆ’ ಎಂದು ಹೇಳಿ ಚಿತ್ರತಂಡದವರಿಗೆ ಶುಭ ಕೋರಿದರು.

ಇನ್ನು, ಸಿದ್ಧರಾಮಯ್ಯನವರು ಚಿತ್ರದ ಮುಹೂರ್ತಕ್ಕೆ ಬಂದು ಕ್ಲಾಪ್ ಮಾಡಿದ್ದನ್ನು ನೆನಪಿಸಿಕೊಂಡರು. ‘ಇತ್ತೀಚೆಗೆ ಸಿನಿಮಾ ನೋಡೋದು ಕಡಿಮೆಯಾಗಿದೆ. ನಾನು ಓದುತ್ತಿದ್ದಾಗ ವಾರಕ್ಕೆ ನಾಲ್ಕೈದು ಸಿನಿಮಾ ನೋಡುತ್ತಿದ್ದೆ. ಡಾ. ರಾಜಕುಮಾರ್ ನನ್ನ ಮೆಚ್ಚಿನ ನಟ. ಅವರ ಸಿನಿಮಾ ಹೆಚ್ಚು ನೋಡಿದ್ದೀನಿ. ಸಿನಿಮಾ ಮಾಧ್ಯಮ ಬರೀ ಮನರಂಜನೆ ಮಾತ್ರವಲ್ಲ. ಸಿನಿಮಾ ನೋಡಿ ಜನ ಒಳ್ಳೆಯವರೂ ಆಗುತ್ತಾರೆ, ಕೆಟ್ಟವರೂ ಆಗುತ್ತಾರೆ. ಈ ಚಿತ್ರವು ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ ಎಂದು ಆಶಿಸುತ್ತೇನೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net