

| ಹರ್ಷವರ್ಧನ್ ಬೆಂಗಳೂರು
ಈ ಸಂಬಂಧಗಳೇ ಹಾಗೆ ಸರ್, ತುಂಬ ಕಾಂಪ್ಲಿಕೇಟೆಡ್...
ಎಂದು ಹುಡುಗನ ತಂದೆಯ ಬಳಿ ಹೇಳಿಕೊಳ್ಳುತ್ತಾರೆ ಹುಡುಗಿಯ ತಂದೆ. ‘ಸಕುಟುಂಬ ಸಮೇತ’ ಚಿತ್ರದ ಕಥೆ ಸುತ್ತುವುದೇ ಈ ಕಾಂಪ್ಲಿಕೇಟೆಡ್ ಸಂಬಂಧಗಳ ಸುತ್ತ. ಕೊನೆಗೆ ಜಟಿಲ ಸಂಬಂಧಗಳ ನಡುವೆ ಉತ್ತಮ ಬಾಂಧವ್ಯ ಹುಟ್ಟುತ್ತಾ ಎಂಬುದೇ ಈ ಸಿನಿಮಾ. ಇನ್ನೊಂದು ವಾರವಿದೆ ಎನ್ನುವಾಗ ಮದುಮಗಳು ತನಗೆ ಮದುವೆ ಬೇಡ ಎಂದು ನಿಷ್ಠುರವಾಗಿ ಹೇಳಿಬಿಡುತ್ತಾರೆ. ತಬ್ಬಿಬ್ಬಾಗುವ ಎರಡೂ ಕುಟುಂಬಗಳು ಸಮಸ್ಯೆ ಬಗೆಹರಿಸಲು ಒಂದೆಡೆ ಸೇರುತ್ತವೆ. ಅಲ್ಲಿ ಆ ಕುಟುಂಬಗಳ ಸಮಸ್ಯೆಗಳ ಅನಾವರಣವಾಗುತ್ತದೆ. ಆ ಎಲ್ಲ ಸಮಸ್ಯೆಗಳ ನಡುವೆ ಮದುವೆ ನಡೆಯುತ್ತದಾ? ಸಿನಿಮಾ ನೋಡಿ...
ಅಬ್ಬರ, ಅದ್ಧೂರಿತನ, ಬಿಲ್ಡಪ್ ಇಲ್ಲದೇ ತುಂಬ ಸರಳವಾದ ಕಥೆಗೆ ಅಲ್ಲಲ್ಲಿ ತಿಳಿ ಹಾಸ್ಯದ ಲೇಪನ ಮಾಡಿ, ಕೆಲವೇ ಪಾತ್ರಗಳೊಂದಿಗೆ ಸರಳವಾಗಿ ಜನರ ಮುಂದೆ ತಂದಿದ್ದಾರೆ ನಿರ್ದೇಶಕ ರಾಹುಲ್. ನನಗೂ ಹೀಗಾಗಿತ್ತಲ್ವಾ ಅಂತ ಹಲವೆಡೆ ಪ್ರೇಕ್ಷಕರು ಅಂದುಕೊಳ್ಳುವಷ್ಟು ಆಪ್ತವಾಗಿ ರುವುದೇ ಚಿತ್ರದ ಪ್ಲಸ್. ಮಿಥುನ್ ಮುಕುಂದನ್ ಅವರ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸಿದೆ. ನೋಡಲು ಸುರಸುಂದರನಲ್ಲದ ಮಿಡಲ್ ಕ್ಲಾಸ್ ಹುಡುಗನಿಗೆ ಶ್ರೀಮಂತ ಸುಂದರಿ ಸಿಕ್ಕಾಗ ಆಗುವ ಖುಷಿ, ಆಕೆಯನ್ನು ಕಳೆದುಕೊಳ್ಳುವ ನೋವು ಎರಡೂ ಭರತ್ ಮುಖದಲ್ಲಿ ನೋಡಬಹುದು. ತನಗೇನು ಬೇಕು, ಏನು ಬೇಡ ಎಂಬ ಸ್ಪಷ್ಟತೆ ಇಲ್ಲದೇ ತಳಮಳಕ್ಕೊಳಗಾಗುವ ಪಾತ್ರದಲ್ಲಿ ಸಿರಿ ಕೂಡ ಇಷ್ಟವಾಗುತ್ತಾರೆ. ಅವರಿಬ್ಬರನ್ನೂ ಮೀರಿಸುವ ಹೈಲೈಟ್ಸ್ ಅಂದರೆ ಅಚ್ಯುತ್ ಕುಮಾರ್, ರೇಖಾ ಕೂಡ್ಲಿಗಿ, ಕೃಷ್ಣ ಹೆಬ್ಬಾಳೆ ಹಾಗೂ ಪುಷ್ಪ ಬೆಳವಾಡಿ. ಕೆಲವೆಡೆ ಸಂಭಾಷಣೆ ಇಲ್ಲದೆ ನಟನೆ, ಇನ್ನೂ ಕೆಲವೆಡೆ ಬರೀ ಸಂಭಾಷಣೆಗಳ ಮೂಲಕವೇ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.